ಉಡುಪಿ, ಮಾ. 26: ನಗರದಲ್ಲಿ ಹೃದಯ ಕಲುಕುವ ಅಪಘಾತವೊಂದು ನಡೆದಿದ್ದು, ಕಾರು ಡಿಕ್ಕಿಯಿಂದ ಎರಡು ವರ್ಷದ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಮಾರ್ಚ್ 23 ರಂದು ಸಂಜೆ ಸುಮಾರು 6:40ರ ಸುಮಾರಿಗೆ, ಬಡಗುಬೆಟ್ಟು ಗ್ರಾಮದ ಪೊಲೀಸ್ ವಸತಿಗೃಹದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಹರಿವಿಠಲ ಹೆಚ್.ಕೆ ಎಂಬಾತನು KA20MF5612 ಸಂಖ್ಯೆಯ ಕಾರನ್ನು ಮಿಷನ್ ಕಂಪೌಂಡ್ ದಿಕ್ಕಿನಿಂದ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.
ಈ ವೇಳೆ ಮೂಕಾಂಬಿಕಾ ಭಜನಾ ಮಂದಿರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಅಗಸ್ತ್ಯ ಪಲ್ಲೇದ್ (2) ಎಂಬ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಗು ನೆಲಕ್ಕೆ ಬಿದ್ದು ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದೆ.
ಗಾಯಗೊಂಡ ಮಗುವನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶ್ರೀಮತಿ ಮಹಾದೇವಿ ಅ. ಲಿಂಗದಳ್ಳಿ ನೀಡಿದ ದೂರಿನ ಮೇರೆಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







