ಕುಂದಾಪುರ: ಫೇಸ್‌ಬುಕ್‌ನಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಜಾಹೀರಾತು ನೋಡಿ ಕೆಲಸಕ್ಕೆ ಸೇರಲು ಮುಂದಾದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1,86,570 ಕಳೆದುಕೊಂಡ ಘಟನೆ ನಡೆದಿದೆ.
ಸೌಕೂರು ಗುಲ್ವಾಡಿ ಗ್ರಾಮದ ಮೊರಿಕಾರ್ ಮನೆಯ ರೇಣುಕಾ ಗಣೇಶ ದೇವಾಡಿಗ 2026ರ ಆಗಸ್ಟ್ 16ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುತ್ತಿದ್ದಾಗ ‘MEESHO NEED STAFF’ ಎಂಬ ಹೆಸರಿನ ಪಾರ್ಟ್‌ಟೈಮ್ ಉದ್ಯೋಗದ ಜಾಹೀರಾತು ಗಮನಕ್ಕೆ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಾಪ್ ಸಂಪರ್ಕವಾಗಿದ್ದು, ಬಳಿಕ ಟೆಲಿಗ್ರಾಮ್ ಖಾತೆಗೆ ಸೇರುವಂತೆ ಮಾಡಲಾಗಿತ್ತು.
ಟೆಲಿಗ್ರಾಮ್ ಮೂಲಕ ವಿವಿಧ ಟಾಸ್ಕ್‌ಗಳನ್ನು ನೀಡಿ ಹಣ ಗಳಿಸುವ ಆಮಿಷವೊಡ್ಡಲಾಗಿತ್ತು. ಆರಂಭದಲ್ಲಿ ಟಾಸ್ಕ್ ಪೂರ್ಣಗೊಳಿಸಿದಾಗ ₹120 ಹಾಗೂ ನಂತರ ಹಂತ ಹಂತವಾಗಿ ಒಟ್ಟು ₹10,130 ಹಣವನ್ನು ಪಾವತಿಸಿ ನಂಬಿಕೆ ಮೂಡಿಸಿದ್ದರು.
ಬಳಿಕ ಹೆಚ್ಚಿನ ಹಣ ಗಳಿಸುವ ಆಸೆ ತೋರಿಸಿ ವಿವಿಧ ಟಾಸ್ಕ್‌ಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದರು.
ಇದನ್ನು ನಂಬಿದ ಮಹಿಳೆ ಒಟ್ಟು ₹1,86,570 ಹಣವನ್ನು ಆರೋಪಿತರ ಖಾತೆಗೆ ವರ್ಗಾಯಿಸಿ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







