ಮಂಗಳೂರು: ಬಡಗುಳಿಪಾಡಿ ಗ್ರಾಮದ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿರುವ ಕೋಕೋ ರಿಚ್ ಕಂಪನಿಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ನ.4ರಂದು ಬೆಳಿಗ್ಗೆ ಪೊಲೀಸ್ ರೌಂಡ್ಸ್ನಲ್ಲಿದ್ದ ಬಜಪೆ ಠಾಣೆಯ ಪಿಎಸ್ಐ ಕುಮಾರೇಶನ್ ಅವರು, ಕಂಪನಿಯ ಬಳಿ ಹೆಗಲಿಗೆ ಬ್ಯಾಗ್ ಹಾಕಿಕೊಂಡು ನಿಂತಿದ್ದ ವ್ಯಕ್ತಿಯನ್ನು ಗಮನಿಸಿದ್ದಾರೆ. ಪೊಲೀಸರು ಸಮೀಪಿಸುತ್ತಿದ್ದಂತೆ ಆತ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಿಬ್ಬಂದಿಯ ಸಹಾಯದಿಂದ ಆತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.
ಬಂಧಿತನನ್ನು ಒಡಿಶಾ ಮೂಲದ, ಪ್ರಸ್ತುತ ತೆಂಕ ಎಡಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೂರ್ಯಕಾಂತ ಜೇನಾ (43) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು, ಸ್ಥಳೀಯ ಗಿರಾಕಿಗಳಿಗೆ ಮಾರಾಟ ಮಾಡಲು ಕಾಯುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆತನ ಬಳಿಯಿದ್ದ ನೀಲಿ ಬಣ್ಣದ ಬ್ಯಾಗ್ ಪರಿಶೀಲಿಸಿದಾಗ ಮೂರು ಪ್ಲಾಸ್ಟಿಕ್ ಪ್ಯಾಕೆಟ್ಗಳಲ್ಲಿದ್ದ ಒಟ್ಟು 257 ಗ್ರಾಂ ಗಾಂಜಾ ಪತ್ತೆಯಾಗಿದೆ.
ಇದರ ಅಂದಾಜು ಮೌಲ್ಯ ₹10,000 ಎಂದು ತಿಳಿದುಬಂದಿದೆ. ಅಲ್ಲದೆ, ಕೀಪ್ಯಾಡ್ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಬ್ಯಾಗ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.







