ಮಂಗಳೂರು: HDFC ಲೈಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ತಂದೆಯ ಹೆಸರಿನಲ್ಲಿದ್ದ ವಿಮೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹2 ಲಕ್ಷ ವಂಚಿಸಿರುವ ಘಟನೆ ವರದಿಯಾಗಿದೆ.
45 ವರ್ಷದ ವ್ಯಕ್ತಿಯೊಬ್ಬರು ಕೇರಳದ ತಿರುವನಂತಪುರಂನ HDFC ಲೈಫ್ ಇನ್ಶೂರೆನ್ಸ್ ಶಾಖೆಯಲ್ಲಿ ತಂದೆಯ ಹೆಸರಿನಲ್ಲಿದ್ದ ವಿಮೆಯನ್ನು ತಮ್ಮ ಹೆಸರಿಗೆ ಬದಲಾಯಿಸುವಂತೆ ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಅರ್ಜಿ ಸಲ್ಲಿಸಿದ್ದರು.
ಬಳಿಕ ಸೆ.7ರಂದು ನವೀನ್ ಜೆ. ಎಂಬಾತ ತಾನು HDFC ಲೈಫ್ ಇನ್ಶೂರೆನ್ಸ್ನ ಹಿರಿಯ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಹೊಸ ವಿಮೆ ಮಾಡಿಸಲು ₹2 ಲಕ್ಷ ಮುಂಗಡ ಪಾವತಿಸಬೇಕು ಹಾಗೂ ಆ ಮೊತ್ತವನ್ನು ಬಳಿಕ ಪ್ರೀಮಿಯಂನಲ್ಲಿ ಹಿಂತಿರುಗಿಸುವುದಾಗಿ ನಂಬಿಸಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ. ಅದರ ಮೂಲಕ ₹2 ಲಕ್ಷ ಪಾವತಿಸಿದ್ದಾರೆ.
ವಿಮೆಯಲ್ಲಿನ ಹೆಸರು ಬದಲಾವಣೆಗೆ 45 ದಿನಗಳ ಕಾಲಾವಕಾಶ ಬೇಕೆಂದು ತಿಳಿಸಿದ್ದರೂ ಯಾವುದೇ ಬದಲಾವಣೆ ಆಗಿರಲಿಲ್ಲ. ಅಲ್ಲದೆ, ಮತ್ತೆ ಮತ್ತೆ ಕರೆ ಮಾಡಿ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದಾಗ ವಂಚನೆಯ ಅನುಮಾನಗೊಂಡ ಪಿರ್ಯಾದಿದಾರರು ನ.1ರಂದು NCRP ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದಾರೆ.
HDFC ಲೈಫ್ ಇನ್ಶೂರೆನ್ಸ್ ಹೆಸರಿನಲ್ಲಿ ಅಪರಿಚಿತರು ₹2 ಲಕ್ಷ ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮಂಗಳೂರು CEN ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.







