ಮಣಿಪಾಲ, ಅಕ್ಟೋಬರ್ 13, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪರಿಗಣಿತ ವಿಶ್ವವಿದ್ಯಾಲಯವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿರುವ ಮಾಹೆಯು, ‘ಪರಿವರ್ತನಶೀಲ ಜಗತ್ತಿನಲ್ಲಿ ಸೋಂಕುಕಾರಕ ರೋಗಗಳ ಸವಾಲಿನ ನಿಭಾವಣೆ’ ಎಂಬ ವಿಷಯದ ಕುರಿತು ಜಾಗತಿಕ ಮಟ್ಟದ ನೇಚರ್ ಸಮ್ಮೇಳನವನ್ನು ಅಕ್ಟೋಬರ್ 14ರಿಂದ 16, 2026ರವರೆಗೆ ಮೂರು ದಿನಗಳ ಕಾಲ ಡಾ. ಟಿ. ಎಂ. ಎ. ಪೈ ಸಭಾಂಗಣದಲ್ಲಿ ಆಯೋಜಿಸಿದೆ. ನೇಚರ್ ಮೆಡಿಸಿನ್, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್, ನೇಚರ್ ಕಮ್ಯುನಿಕೇಶನ್ಸ್ ಮೊದಲಾದ ಶೈಕ್ಷಣಿಕ-ವೈಜ್ಞಾನಿಕ ನಿಯತಕಾಲಿಕೆಗಳ ಸಹಭಾಗಿತ್ವದಲ್ಲಿ ಮಾಹೆ ಆಯೋಜಿಸಿರುವ ಈ ಸಮಾವೇಶವು ಅಂತಾರಾಷ್ಟ್ರೀಯ ತಜ್ಞರು, ಸಂಶೋಧಕರು, ವೈದ್ಯರು, ನೀತಿ ನಿರೂಪಕರು ಹಾಗೂ ಉದ್ಯಮದ ಪ್ರಮುಖರಿಗೆ ಜಾಗತಿಕ ವೇದಿಕೆಯನ್ನು ಒದಗಿಸಲಿದೆ. ಜ್ಞಾನ ವಿನಿಮಯ, ವೈಜ್ಞಾನಿಕ ಒಳನೋಟಗಳ ಪ್ರಸರಣ ಹಾಗೂ ಹೊಸದಾಗಿ ಉದ್ಭವಿಸುತ್ತಿರುವ ಸಾಂಕ್ರಾಮಿಕ ರೋಗಗಳಿಂದಾಗಿ ಸಾರ್ವಜನಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಗಮನಹರಿಸಲು ಈ ಸಮಾವೇಶ ವೇದಿಕೆ ಒದಗಿಸಲಿದೆ. ‘ಏಕ ಸ್ವಾಸ್ಥ್ಯ’ (ಒನ್ ಹೆಲ್ತ್) ಪರಿಕಲ್ಪನೆ ಸೇರಿದಂತೆ ಪ್ರಮುಖ ಜಾಗತಿಕ ಆರೋಗ್ಯ ಸವಾಲುಗಳ ಕುರಿತು ಸಮಾವೇಶದಲ್ಲಿ ಸಂವಾದ ನಡೆಯಲಿದೆ. ವಿವಿಧ ಕ್ಷೇತ್ರಗಳ ತಜ್ಞರು ಜ್ಞಾನ ವಿನಿಮಯ ಮಾಡಿಕೊಳ್ಳಲು, ಸಂಶೋಧನಾ ಫಲಿತಾಂಶಗಳ ಕುರಿತು ಚರ್ಚಿಸಲು ಹಾಗೂ ಸಾಂಕ್ರಾಮಿಕ ರೋಗಗಳ ನಿರಂತರ ಬದಲಾಗುತ್ತಿರುವ ಸವಾಲುಗಳನ್ನು ನಿಭಾಯಿಸಲು ನವೀನ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಈ ಸಮಾವೇಶದಲ್ಲಿ ಅವಕಾಶ ನೀಡಲಾಗುತ್ತದೆ.
ಆರೋಗ್ಯ ಸಂಶೋಧನೆ ಮತ್ತು ನವೀನ ಸ್ವಾಸ್ಥ್ಯ ತಂತ್ರಜ್ಞಾನದಲ್ಲಿ ವಿಶ್ವಮಟ್ಟದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮಾಹೆಯಲ್ಲಿ ಆಯೋಜನೆಗೊಳ್ಳುತ್ತಿರುವ ಈ ಸಮಾವೇಶ ಮಹತ್ತ್ವ ಪಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ತಜ್ಞರು ಭಾಗವಹಿಸುವ ಈ ಸಮಾವೇಶದಲ್ಲಿ ದೇಶದ ಸಂಶೋಧನೆ ಹಾಗೂ ನವೀನ ಸಾಧನೆಗಳ ಪ್ರದರ್ಶನವೂ ಇಲ್ಲಿ ನಡೆಯಲಿದೆ.
ಜಾಗತಿಕ ನೇಚರ್ ಸಮಾವೇಶದ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ‘ಜಾಗತಿಕವಾಗಿ ಹೆಚ್ಚುತ್ತಿರುವ ಸ್ವಾಸ್ಥ್ಯ ಸಂಬಂಧಿ ಸವಾಲುಗಳನ್ನು ನಿಭಾಯಿಸಲು ವಿವಿಧ ಜ್ಞಾನಶಿಸ್ತುಗಳು ಜೊತೆಯಾಗಿ ಪರಿಹಾರ ಹುಡುಕುವ ಅಗತ್ಯವಿದೆ. ಹಾಗಾಗಿ, ಜ್ಞಾನದ ವಿವಿಧ ಶಾಖೆಗಳ ನಡುವೆ ಸಹಭಾಗಿತ್ವ ನಡೆಯಬೇಕಿದೆ. ಆರೋಗ್ಯ ರಕ್ಷಣೆಯ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕಿದೆ. ಸುಸ್ಥಿರ ಸಾಮಾಜಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡುವ ಮತ್ತು ವಿಶ್ವದ ವೈದ್ಯಕೀಯ, ಔಷಧವಿಜ್ಞಾನ, ತಂತ್ರಜ್ಞಾನದ ತಜ್ಞರನ್ನು ಒಗ್ಗೂಡಿಸುವ ಆಶಯದಲ್ಲಿ ಮಾಹೆ ಜಾಗತಿಕ ಮಟ್ಟದ ನೇಚರ್ ಸಮಾವೇಶವನ್ನು ಆಯೋಜಿಸುತ್ತಿದೆ’ ಎಂದರು,
ಉಪನ್ಯಾಸ, ಸಂವಾದ, ಭಿತ್ತಿಚಿತ್ರ ಪ್ರಸ್ತುತಿಗಳಂಥ ವೈವಿಧ್ಯ ಕಲಾಪಗಳು ಸಂಪನ್ನಗೊಳ್ಳಲಿರುವ ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಆರೋಗ್ಯ ತಜ್ಞರಾದ ಅಲೆಸ್ಸಾಂಡ್ರೊ ವೆಸ್ಪಿಗ್ನಾನಿ (ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾನಿಲಯ, ಅಮೆರಿಕ), ಎಲೈನ್ ನ್ಸೋಸಿ (ಬೋಸ್ಟನ್ ವಿಶ್ವವಿದ್ಯಾನಿಲಯ, ಅಮೆರಿಕ), ಲಾರೆನ್ ಗಾರ್ಡ್ನರ್ (ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ, ಅಮೆರಿಕ), ಮಧುಕರ್ ಪೈ (ಮೆಕ್‌ಗಿಲ್ ವಿಶ್ವವಿದ್ಯಾನಿಲಯ, ಕೆನಡಾ), ಶಬೀರ್ ಎ. ಮಧಿ (ವಿಟ್‌ವಾಟರ್ಸ್‌ರಾಂಡ್ ವಿಶ್ವವಿದ್ಯಾನಿಲಯ, ದಕ್ಷಿಣ ಆಫ್ರಿಕಾ) ಮತ್ತು ಮರಿಯನ್ ಕೂಪ್‌ಮನ್ಸ್ (ಎರಾಸ್ಮಸ್ ವಿಶ್ವವಿದ್ಯಾನಿಲಯ ರೋಟರ್‌ಡ್ಯಾಮ್, ನೆದರ್‌ಲ್ಯಾಂಡ್ಸ್) ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.







