ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯರು, ಅತ್ಯಂತ ಅಪರೂಪದ ಹಾಗೂ ಹೆಚ್ಚಿನ ಅಪಾಯವಿದ್ದ ಹೆರಿಗೆಯೊಂದರಲ್ಲಿ ತಾಯಿ, ಮಗು ಮತ್ತು ಗರ್ಭಾಶಯವನ್ನು ಉಳಿಸಿದ್ದಾರೆ
ಹೃದಯ ಸಮಸ್ಯೆಯ ನಡುವೆಯೂ ಎರಡು ಬೃಹತ್ ಫೈಬ್ರಾಯ್ಡ್‌ಗಳಿಂದ ಬಳಲುತ್ತಿದ್ದ ಮಹಿಳೆಗೆ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ ತಪ್ಪಿಸಿದ ಪ್ರಸೂತಿ ತಜ್ಞರು ಮತ್ತು ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ವೈದ್ಯರ ಯಶಸ್ವಿ ಸಮನ್ವಯ
ಮಣಿಪಾಲ, 12 ಅಕ್ಟೋಬರ್ 2026: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಗಂಭೀರ ಹೃದಯದ ಸಮಸ್ಯೆ ಮತ್ತು ಎರಡು ಬೃಹತ್ ಫೈಬ್ರಾಯ್ಡ್‌ಗಳಿಂದ (ಗರ್ಭಾಶಯದ ಗಡ್ಡೆಗಳು) ಕೂಡಿದ ಸಂಕೀರ್ಣ ಗರ್ಭಧಾರಣೆಯಿದ್ದ 32 ವರ್ಷದ ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವುದರೊಂದಿಗೆ ಅವರ ಗರ್ಭಾಶಯವನ್ನೂ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಗ್ಯ ಸಮಸ್ಯೆಗಳ ಸಂಯೋಜನೆಯು ಜೀವಕ್ಕೆ ಅಪಾಯಕಾರಿ ರಕ್ತಸ್ರಾವ ಮತ್ತು ಗರ್ಭಾಶಯವನ್ನು ತೆಗೆದುಹಾಕಬೇಕಾದ ಪರಿಸ್ಥಿತಿಯಂತಹ ಹೆಚ್ಚಿನ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆಯಿತ್ತು.

37 ವಾರಗಳ ಗರ್ಭಿಣಿಯಾಗಿದ್ದ ಈ ಮಹಿಳೆಗೆ ದೇಹದ ಪ್ರಮುಖ ರಕ್ತನಾಳವಾದ ಮಹಾಪಧಮನಿಯಲ್ಲಿ (Aorta) ಕಿರಿದಾಗುವಿಕೆ ಉಂಟಾಗಿತ್ತು. ಇದನ್ನು ಹಿಂದೆ ಸ್ಟೆಂಟ್ ಅಳವಡಿಸುವ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಇದರ ಜೊತೆಗೆ, ಸಾಮಾನ್ಯವಾಗಿ ಮೂರು ಕವಾಟದ ಪದರಗಳಿರಬೇಕಾದ ಮಹಾಪಧಮನಿಯ ಕವಾಟದಲ್ಲಿ (Aortic Valve) ಎರಡು ಪದರಗಳಷ್ಟೇ ಇರುವ ‘ಬೈಕಸ್ಪಿಡ್ ಏಆರ್ಟಿಕ್ ವಾಲ್ವ್’ ಎಂಬ ಹೃದಯದ ಸ್ಥಿತಿಯೂ ಇತ್ತು. ಅಲ್ಲದೆ, ಅವರು ದೀರ್ಘಕಾಲದಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಈ ಹಿಂದೆ ಎರಡು ಬಾರಿ ಗರ್ಭಾಶಯದ ಹೊರಗೆ ಗರ್ಭ ಬೆಳೆಯುವ ‘ಅಪಸ್ಥಾನಿಕ ಗರ್ಭಧಾರಣೆ’ (Ectopic Pregnancy) ಉಂಟಾಗಿ ಎರಡು ಬಾರಿ ಗರ್ಭಪಾತವನ್ನು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಒಂದು ಫಾಲೋಪಿಯನ್ ಟ್ಯೂಬ್‌ನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗಿತ್ತು.
ಈ ಸವಾಲಿಗೆ ಮತ್ತಷ್ಟು ಸಂಕೀರ್ಣತೆ ತಂದದ್ದು ಗರ್ಭಾಶಯದ ಗೋಡೆಯಲ್ಲಿ ಕಾಣಿಸಿಕೊಂಡಿದ್ದ ಎರಡು ಬೃಹತ್ ಫೈಬ್ರಾಯ್ಡ್‌ಗಳು. ಇವು ಕ್ಯಾನ್ಸರ್‌ಕಾರಕವಲ್ಲದ ಗಡ್ಡೆಗಳಾಗಿದ್ದು, ಇಷ್ಟು ದೊಡ್ಡ ಗಾತ್ರದ ಫೈಬ್ರಾಯ್ಡ್‌ಗಳಿಗೆ ಹೆಚ್ಚಿನ ಪ್ರಮಾಣದ ರಕ್ತ ಪೂರೈಕೆ ಇರುವುದರಿಂದ ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗುವ ಅಪಾಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ತಾಯಿಯ ಜೀವವನ್ನು ಉಳಿಸಲು ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದನ್ನು ಹೊರತುಪಡಿಸಿ ವೈದ್ಯರಿಗೆ ಬೇರೆ ಆಯ್ಕೆ ಇಲ್ಲದ ಪರಿಸ್ಥಿತಿಯೂ ಎದುರಾಗಬಹುದು.
“ಹೃದಯ ಸಂಬಂಧಿ ಸಮಸ್ಯೆಗೆ ಈಗಾಗಲೇ ಚಿಕಿತ್ಸೆ ಪಡೆದಿರುವ ತಾಯಿಯಲ್ಲಿ ಹೆಚ್ಚಿನ ಪ್ರಮಾಣದ ರಕ್ತಸ್ರಾವವು ಗರ್ಭಾಶಯಕ್ಕೆ ಮಾತ್ರವಲ್ಲ, ಹೃದಯಕ್ಕೂ ಅಪಾಯಕಾರಿಯಾಗಬಹುದು. ಈ ಅಪಾಯಗಳ ಬಗ್ಗೆ ನಮಗೆ ಮೊದಲೇ ಸಂಪೂರ್ಣ ಅರಿವಿತ್ತು. ಆದ್ದರಿಂದ, ಹೆರಿಗೆಗೆ ಸಂಬಂಧಿಸಿದ ಪ್ರತಿಯೊಂದು ಹಂತವನ್ನೂ ಅರಿವಳಿಕೆ ತಜ್ಞರು ಹಾಗೂ ಇಂಟರ್ವೆನ್ಷನಲ್ ರೇಡಿಯಾಲಜಿ ತಜ್ಞರೊಂದಿಗೆ ಸಮನ್ವಯದಿಂದ ಪೂರ್ವಯೋಜನೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸಾ ಕೊಠಡಿಯಲ್ಲೇ ಇಂಟರ್ವೆನ್ಷನಲ್ ರೇಡಿಯಾಲಜಿ ತಂಡ ಸಿದ್ಧವಾಗಿದ್ದರಿಂದ, ರಕ್ತಸ್ರಾವವನ್ನು ನಿಯಂತ್ರಿಸಲು, ಎರಡೂ ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಲು ಹಾಗೂ ಗರ್ಭಾಶಯವನ್ನು ಸಂರಕ್ಷಿಸಲು ಸಾಧ್ಯವಾಯಿತು. ಯುವತಿಯೊಬ್ಬಳಿಗೆ ತನ್ನ ಗರ್ಭಾಶಯವನ್ನು ಉಳಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ,” ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥರಾದ ಡಾ. ಜ್ಯೋತಿ ಶೆಟ್ಟಿ ಅವರು ಹೇಳಿದರು.
ಶಸ್ತ್ರಚಿಕಿತ್ಸೆಗೆ ಮುನ್ನ, ಡಾ. ಹರ್ಷಿತ್ ಕ್ರಮಧಾರಿ ಅವರ ನೇತೃತ್ವದ ಇಂಟರ್ವೆನ್ಷನಲ್ ರೇಡಿಯಾಲಜಿ ತಂಡವು ಗರ್ಭಾಶಯಕ್ಕೆ ರಕ್ತ ಪೂರೈಸುವ ಪ್ರಮುಖ ರಕ್ತನಾಳಗಳಾದ ಎರಡೂ ಆಂತರಿಕ ಇಲಿಯಾಕ್ ಅಪಧಮನಿಗಳಲ್ಲಿ (Internal Iliac Arteries) ಸಣ್ಣ ಬಲೂನ್ ಕ್ಯಾಥೆಟರ್‌ಗಳನ್ನು ಅಳವಡಿಸಿತು. ಅಗತ್ಯವಿದ್ದಲ್ಲಿ ರಕ್ತದ ಹರಿವನ್ನು ತ್ವರಿತವಾಗಿ ನಿಯಂತ್ರಿಸಲು ಈ ವ್ಯವಸ್ಥೆ ನೆರವಾಗುವಂತಿತ್ತು. ನಂತರ ಡಾ. ರೇಖಾ, ಸಹ ಪ್ರಾಧ್ಯಾಪಕಿ, ಅವರೊಂದಿಗೆ ಡಾ. ಪ್ರತೀಕ್ಷಾ ಹಾಗೂ ಡಾ. ದಿವ್ಯಾ ಸಿ. ಅವರು ಸಾಮಾನ್ಯ ಅರಿವಳಿಕೆ (General Anesthesia) ಅಡಿಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದರು. ಈ ವೇಳೆ 2.6 ಕೆ.ಜಿ. ತೂಕದ ಆರೋಗ್ಯವಂತ ಹೆಣ್ಣು ಮಗು ಜನಿಸಿದ್ದು, ಜನನದ ತಕ್ಷಣವೇ ಅಳುವ ಮೂಲಕ ತನ್ನ ಆರೋಗ್ಯವನ್ನು ಸೂಚಿಸಿತು.
ವೈದ್ಯರು ನಿರೀಕ್ಷಿಸಿದ್ದಂತೆ, ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಯಿತು. ರಕ್ತನಾಳಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಜೆಲ್‌ಫೋಮ್’ (Gelfoam) ಬಳಸಿ ಫೈಬ್ರಾಯ್ಡ್‌ಗಳಿಗೆ ರಕ್ತ ಪೂರೈಕೆಯನ್ನು ತಡೆಯುವ ಮೊದಲ ಪ್ರಯತ್ನವು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇದಕ್ಕೆ ಕಾರಣ, ಈ ಫೈಬ್ರಾಯ್ಡ್‌ಗಳಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ದೊಡ್ಡ ಗಾತ್ರದ ರಕ್ತನಾಳಗಳು ರಕ್ತ ಪೂರೈಕೆ ಮಾಡುತ್ತಿದ್ದವು. ನಂತರ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್‌ಗಳು ಸೈಯಾನೋಅಕ್ರಿಲೇಟ್ (Cyanoacrylate) ಗ್ಲೂ ಎಂಬ ವೈದ್ಯಕೀಯ ಬಳಕೆಯ ಅಂಟು ದ್ರವ್ಯವನ್ನು ಬಳಸಿಕೊಂಡು ಎಡ ಗರ್ಭಾಶಯದ ಅಪಧಮನಿಯಿಂದ (Left Uterine Artery) ಫೈಬ್ರಾಯ್ಡ್‌ಗಳಿಗೆ ರಕ್ತ ಪೂರೈಸುತ್ತಿದ್ದ ರಕ್ತನಾಳಗಳನ್ನು ಮುಚ್ಚಿದರು. ಇದರಿಂದ ರಕ್ತಸ್ರಾವವು ನಿಯಂತ್ರಣಕ್ಕೆ ಬಂದಿತು.
ರಕ್ತಸ್ರಾವವನ್ನು ನಿಯಂತ್ರಣಕ್ಕೆ ತಂದ ನಂತರ, ಅದೇ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಎರಡೂ ಫೈಬ್ರಾಯ್ಡ್‌ಗಳನ್ನು ಯಶಸ್ವಿಯಾಗಿ ತೆಗೆದುಹಾಕಿದರು. ಅವುಗಳಲ್ಲಿ ಒಂದು ಸುಮಾರು 15 × 14 ಸೆಂ.ಮೀ. ಗಾತ್ರ ಮತ್ತು 960 ಗ್ರಾಂ ತೂಕ ಹೊಂದಿದ್ದರೆ, ಮತ್ತೊಂದು ಸುಮಾರು 14 × 12 ಸೆಂ.ಮೀ. ಗಾತ್ರ ಮತ್ತು 740 ಗ್ರಾಂ ತೂಕ ಹೊಂದಿತ್ತು. ಎರಡೂ ಫೈಬ್ರಾಯ್ಡ್‌ಗಳ ಒಟ್ಟು ತೂಕ ಸುಮಾರು 1.7 ಕೆ.ಜಿ. ಆಗಿತ್ತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸುಮಾರು ಎರಡು ಲೀಟರ್‌ಗಳಷ್ಟು ರಕ್ತ ನಷ್ಟವಾದರೂ, ಸಮಯೋಚಿತವಾಗಿ ಕೈಗೊಂಡ ವೈದ್ಯಕೀಯ ಮುಂಜಾಗ್ರತೆಯಿಂದ ಹೆಚ್ಚಿನ ಪ್ರಮಾಣದ ರಕ್ತ ವರ್ಗಾವಣೆಯ ಅಗತ್ಯ ಎದುರಾಗಲಿಲ್ಲ. ಜೊತೆಗೆ, ಮಹಿಳೆಯ ಗರ್ಭಾಶಯವನ್ನು ಸಹ ಸಂರಕ್ಷಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರನ್ನು ವೈದ್ಯಕೀಯ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡಿತು.
ಈ ಪ್ರಕರಣವು ಬೋಧನಾ ಆಸ್ಪತ್ರೆಯು ರೋಗಿಗೆ ಒದಗಿಸಬಹುದಾದ ಸಮಗ್ರ ವೈದ್ಯಕೀಯ ಸೇವೆಯ ಸಾಮರ್ಥ್ಯವನ್ನು ತೋರಿಸುತ್ತದೆ. ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಒಂದೇ ತಂಡವಾಗಿ ಸಮನ್ವಯದಿಂದ ಕಾರ್ಯನಿರ್ವಹಿಸುವುದರ ಜೊತೆಗೆ, ಇಂಟರ್ವೆನ್ಷನಲ್ ರೇಡಿಯಾಲಜಿ ತಜ್ಞರ ಪರಿಣತಿ ಮತ್ತು ಆಸ್ಪತ್ರೆಯಲ್ಲೇ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳ ಬೆಂಬಲದಿಂದ ಇಂತಹ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕರಾವಳಿ ಕರ್ನಾಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರು ಇಂತಹ ಸಂಕೀರ್ಣ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಮಹಾನಗರಗಳಿಗೆ ತೆರಳುವ ಅಗತ್ಯವಿಲ್ಲದೆ ತಮ್ಮ ಮನೆಯ ಸಮೀಪದಲ್ಲೇ ಪಡೆಯುವಂತಾಗಿಸುವುದು ಮಾಹೆ ಬೋಧನಾ ಆಸ್ಪತ್ರೆಗಳ ನಮ್ಮ ಬದ್ಧತೆಯಾಗಿದೆ,” ಎಂದು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಸುಧಾಕರ್ ಕಂಟಿಪುಡಿ ಅವರು ಹೇಳಿದರು.
ಹೃದ್ರೋಗ, ದೊಡ್ಡ ಗಾತ್ರದ ಫೈಬ್ರಾಯ್ಡ್‌ಗಳು ಅಥವಾ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಅಪಾಯವನ್ನುಂಟುಮಾಡುವ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರಿಗೆ, ಆರಂಭಿಕ ಪ್ರಸವಪೂರ್ವ ತಪಾಸಣೆಗಳು ಮತ್ತು ಸುಸಜ್ಜಿತ ಕೇಂದ್ರದಲ್ಲಿ ಯೋಜಿತ ಹೆರಿಗೆಯ ಮಹತ್ವವನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.







