ಡಲ್ಲಾಸ್ (ಅಮೆರಿಕ), ಅಕ್ಟೋಬರ್ 11: ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ ವಿಶ್ವ ಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ, ಪರ್ಯಾಯೋತ್ತರ ವಿಶ್ವಸಂಚಾರ ಕೈಗೊಂಡಿರುವ ಪರಮಪೂಜ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಮೆರಿಕದ ಡಲ್ಲಾಸ್ ಶ್ರೀಕೃಷ್ಣ ವೃಂದಾವನದ ವತಿಯಿಂದ ಭವ್ಯ ಗುರುವಂದನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಭಗವದ್ಗೀತೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವವನ್ನು ವಿವರಿಸಿದರು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಸಮಾಜಕ್ಕೆ ಆದರ್ಶವಾಗಬೇಕೆಂದು ಕರೆ ನೀಡಿದರು.
ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯರು ಮಾತನಾಡಿ, ಶ್ರೀಪಾದರ ಚತುರ್ಥ ವಿಶ್ವ ಗೀತಾ ಪರ್ಯಾಯದ ಮಹತ್ವ ಹಾಗೂ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕೋಟಿ ಗೀತಾ ಲೇಖನ ಯಜ್ಞ ಸೇರಿದಂತೆ ಪರ್ಯಾಯದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಮರಿಸಿದ ಅವರು, ಡಲ್ಲಾಸ್ ಶ್ರೀಕೃಷ್ಣ ವೃಂದಾವನದ ಧಾರ್ಮಿಕ ಚಟುವಟಿಕೆಗಳು ಹಾಗೂ ಅಭಿವೃದ್ಧಿಗೆ ಭಕ್ತರು ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಕ್ತರು ಶ್ರೀಪಾದರಿಗೆ ವಿಶೇಷ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು. ಶ್ರೀಪಾದರು ನೆರೆದಿದ್ದ ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಫಲಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಾದ ವಿತರಣೆ ನಡೆಯಿತು.
ಬರ್ಟ್ ಠಾಕೂರ್, ಸುರೇಶ್ ಮಂಡುವ, ಸಾಯಿ ಕೃಷ್ಣ, ವಿದ್ಯಾ ಆದ್ಯ, ಹೇಮಂತ್ ಕುಮಾರ್, ಅಭದೇಶ್ ಭಟ್, ಸುಬರ್ಣ ಹಾಗೂ ಶ್ರೀ ಸುಬ್ರಹ್ಮಣ್ಯ ಆಚಾರ್ಯರು ಸೇರಿದಂತೆ ಅನೇಕ ಗಣ್ಯರು ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ವಿಶ್ವಾವಸು ಪೊದ್ದಾರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಡಲ್ಲಾಸ್ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕರಾದ ಶ್ರೀ ವಾದಿರಾಜ ಭಟ್ಟರು ಧನ್ಯವಾದ ಸಮರ್ಪಿಸಿದರು.
ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದಿಂದ ನಡೆದ ಈ ಗುರುವಂದನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ಶ್ರೀಪಾದರ ಆಶೀರ್ವಾದ ಪಡೆದರು.







