ಬೆಂಗಳೂರು, ಅ. 12, 2026: ಆದಿತ್ಯ ಬಿರ್ಲಾ ಸಮೂಹದ ಪ್ರಮುಖ ಆಭರಣ ಬ್ರ್ಯಾಂಡ್ ಆದ ಇಂದ್ರಿಯ, ಬೆಂಗಳೂರಿನಲ್ಲಿ ತನ್ನ ಆರನೇ ಮಳಿಗೆಯನ್ನು ಆರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಮಳಿಗೆಗಳ ಸಂಖ್ಯೆಯನ್ನು ಎಂಟಕ್ಕೆ ಹೆಚ್ಚಿಸಿಕೊಂಡಿದ್ದು, ರಾಜ್ಯಾದ್ಯಂತ ತನ್ನ ಮಾರುಕಟ್ಟೆ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಇದರೊಂದಿಗೆ ಬೆಂಗಳೂರು, ಕರ್ನಾಟಕದಲ್ಲಿ ಸಂಸ್ಥೆಯ ಅತಿ ದೊಡ್ಡ ರಿಟೇಲ್ ಸಂಸ್ಥೆಯಾಗಿ ಹೊರಹೊಮ್ಮಿದೆ.
ನಗರದ ಪ್ರಮುಖ ವಾಣಿಜ್ಯ ತಾಣಗಳಲ್ಲಿ ಒಂದಾದ ಫೋರಂ ಮಾಲ್‌ನಲ್ಲಿ ಆಯಕಟ್ಟಿನ ಸ್ಥಳದಲ್ಲಿ ತಲೆಯೆತ್ತಿರುವ ಈ ನೂತನ ಮಳಿಗೆಯನ್ನು ಗ್ರಾಹಕರಿಗೆ ವಿಶಿಷ್ಟ ಹಾಗೂ ತಲ್ಲೀನಗೊಳಿಸುವ ಆಭರಣ ಶಾಪಿಂಗ್ ಅನುಭವ ನೀಡುವ ನಿಟ್ಟಿನಲ್ಲಿ ಅತ್ಯಂತ ಆಲೋಚನಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಸುಮಾರು 37,000ಕ್ಕೂ ಹೆಚ್ಚು ಬಗೆಯ ಆಕರ್ಷಕ ವಿನ್ಯಾಸಗಳನ್ನು ಒಳಗೊಂಡಿರುವ ಈ ಮಳಿಗೆಯು ವಧುವಿನ ಆಭರಣಗಳು, ಹಬ್ಬದ ವಿಶೇಷ ಕಲೆಕ್ಷನ್‌ಗಳು, ಸಮಕಾಲೀನ ಸ್ಟೇಟ್‌ಮೆಂಟ್ ಪೀಸ್‌ಗಳು ಮತ್ತು ನಿತ್ಯ ಬಳಕೆಯ ಹಗುರವಾದ (ಲೈಟ್‌ವೇಟ್) ಒಡವೆಗಳವರೆಗೆ ಗ್ರಾಹಕರ ಎಲ್ಲ ಬಗೆಯ ಬೇಡಿಕೆಗಳನ್ನು ಪೂರೈಸಲಿದೆ.
ಇಂದ್ರಿಯದ ವಿನ್ಯಾಸಕ್ಕೆ ಪ್ರಥಮ ಆದ್ಯತೆ (ಡಿಸೈನ್-ಫಸ್ಟ್) ತತ್ವವನ್ನು ಸಾಕಾರಗೊಳಿಸುವ ರೀತಿಯಲ್ಲಿ, ಸಾಂಪ್ರದಾಯಿಕ ಕುಸುರಿ ಕಲೆ ಮತ್ತು ಆಧುನಿಕ ಸೌಂದರ್ಯಪ್ರಜ್ಞೆಯನ್ನು ಇಲ್ಲಿ ಸಮ್ಮಿಲನಗೊಳಿಸಲಾಗಿದೆ. ಜತೆಗೆ, ಮಳಿಗೆಯಲ್ಲಿರುವ ಕಾರಿಗರಿ ಕೊಠಡಿ ಹಾಗೂ ಬ್ರೈಡಲ್ ಲಾಂಜ್ ನಂತಹ ವಿಶೇಷ ವಿಭಾಗಗಳು ವೈಯಕ್ತಿಕ ಗ್ರಾಹಕರಿಗೆ ಹಾಗೂ ಕುಟುಂಬ ಸಮೇತ ಬರುವವರಿಗೆ ಅತ್ಯಂತ ವೈಯಕ್ತಿಕ ಮತ್ತು ಉನ್ನತ ಮಟ್ಟದ ಶಾಪಿಂಗ್ ಅನುಭವವನ್ನು ಒದಗಿಸಲಿವೆ.
ದಕ್ಷಿಣ ಭಾರತದಾದ್ಯಂತ ತನ್ನ ಜಾಲವನ್ನು ವಿಸ್ತರಿಸುತ್ತಿರುವ ಇಂದ್ರಿಯ ಪಾಲಿಗೆ ಈ ಹೊಸ ಮಳಿಗೆಯು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಮಹತ್ವದ ಶುಭ ಸಮಾರಂಭಗಳಿಂದ ಹಿಡಿದು ದಿನನಿತ್ಯದ ಶೈಲಿಯವರೆಗಿನ ಎಲ್ಲಾ ಶ್ರೇಣಿಯ ಆಭರಣಗಳ ಸಂಗ್ರಹ ಇಲ್ಲಿದೆ. ಪ್ರತಿಯೊಂದು ವಿಭಾಗ ಮತ್ತು ಸಂದರ್ಭದಲ್ಲೂ ಸಾಂಪ್ರದಾಯಿಕ ಕರಕುಶಲತೆ ಹಾಗೂ ಆಧುನಿಕ ವಿನ್ಯಾಸವನ್ನು ಒಗ್ಗೂಡಿಸಿರುವುದು ಇಲ್ಲಿನ ಶಾಪಿಂಗ್ ಅನುಭವದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
*ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಇಂದ್ರಿಯ ಸಂಸ್ಥೆಯ ಸಿಇಒ ಸಂದೀಪ್ ಕೊಹ್ಲಿ ಅವರು* , “ಭಾರತದ ಅತ್ಯಂತ ಚಲನಶೀಲ ನಗರಗಳಲ್ಲಿ ಬೆಂಗಳೂರು ಪ್ರಮುಖವಾದುದು. ಇಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಹಾಗೂ ಆಧುನಿಕ ಜಾಗತಿಕ ಜೀವನಶೈಲಿ ಪರಸ್ಪರ ಸಾಮರಸ್ಯದಿಂದ ಕೂಡಿವೆ. ಇಲ್ಲಿನ ಗ್ರಾಹಕರು ಸಂಪ್ರದಾಯ ಮತ್ತು ಆಧುನಿಕತೆಯನ್ನು ಪ್ರತ್ಯೇಕ ಅಥವಾ ಪರಸ್ಪರ ವಿರುದ್ಧ ಕಲ್ಪನೆಗಳಾಗಿ ನೋಡುವುದಿಲ್ಲ, ಬದಲಿಗೆ ಎರಡನ್ನೂ ಮುಕ್ತವಾಗಿ ಸ್ವೀಕರಿಸುತ್ತಾರೆ ಎಂಬುದು ಗಮನಾರ್ಹ. ಅವರು ಮದುವೆ, ಹಬ್ಬ-ಹರಿದಿನಗಳು ಹಾಗೂ ಮಹತ್ವದ ಕ್ಷಣಗಳಿಗಾಗಿ ಭಾವನಾತ್ಮಕ ಅರ್ಥ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಆಭರಣಗಳನ್ನು ಬಯಸುವಂತೆಯೇ, ಸಮಕಾಲೀನ ಶೈಲಿ ಹಾಗೂ ಫ್ಯಾಷನ್‌ಗೆ ಹೊಂದುವ ಒಡವೆಗಳನ್ನೂ ಹುಡುಕುತ್ತಾರೆ. ಈ ಕಾರಣಕ್ಕಾಗಿಯೇ ಬೆಂಗಳೂರು ಇಂದ್ರಿಯ ಬ್ರ್ಯಾಂಡ್‌ಗೆ ಅತ್ಯಂತ ಸೂಕ್ತವಾದ ಮಾರುಕಟ್ಟೆಯಾಗಿದೆ. ಇದು ನಮಗೆ ವಿಸ್ತಾರವಾದ ವಿನ್ಯಾಸಗಳನ್ನು ಪರಿಚಯಿಸಲು ಮತ್ತು ಗ್ರಾಹಕರೊಂದಿಗೆ ದೀರ್ಘಕಾಲೀನ ಹಾಗೂ ಅರ್ಥಪೂರ್ಣ ಸಂಬಂಧವನ್ನು ಬೆಸೆಯಲು ಉತ್ತಮ ಅವಕಾಶವನ್ನು ಕಲ್ಪಿಸಿದೆ” ಎಂದು ತಿಳಿಸಿದರು.
ದೇಶಾದ್ಯಂತ ತನ್ನ ಮಳಿಗೆಗಳ ಜಾಲವನ್ನು ಹೆಚ್ಚಿಸುತ್ತಿರುವ ಇಂದ್ರಿಯ ಸಂಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಕರ್ನಾಟಕವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿಯಲಿದೆ. ಮುಂಬರುವ ದಿನಗಳಲ್ಲೂ ರಾಜ್ಯದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಲಿರುವ ಬ್ರ್ಯಾಂಡ್, ತನ್ನ ವಿನ್ಯಾಸ-ಕೇಂದ್ರಿತ ಆಭರಣಗಳ ಸಂಗ್ರಹ ಮತ್ತು ಉನ್ನತ ದರ್ಜೆಯ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿಸಲಿದೆ.






