ಉಡುಪಿ: ಅಲೆವೂರು ಗ್ರಾಮದ ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿರುವ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಗುರುವಾರ ಮುಂಜಾನೆ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು 3ರಿಂದ 4 ಬಾಳೆಹಣ್ಣು ದಾಸ್ತಾನು ಕೇಂದ್ರಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಈ ವೇಳೆ ಬಾಳೆಹಣ್ಣುಗಳನ್ನು ಬೇಗನೆ ಹಣ್ಣಾಗಿಸಲು ಬಳಸಲಾಗುತ್ತಿದ್ದ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ಪದಾರ್ಥಗಳು ಹಾಗೂ ಅವುಗಳನ್ನು ಬಳಸಲು ಬೇಕಾದ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, ಕೃತ್ಯಕ್ಕೆ ಬಳಸುತ್ತಿದ್ದ ವಾಹನಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ ಬಳಸಿ ಹಣ್ಣುಗಳನ್ನು ಹಣ್ಣಾಗಿಸುವುದು ಗ್ರಾಹಕರ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು. ಹೀಗಾಗಿ ಸಾರ್ವಜನಿಕರು ಅತಿಯಾಗಿ ಬಣ್ಣ ಬದಲಿಸಿರುವ, ಅಸಹಜವಾಗಿ ಬೇಗನೆ ಹಣ್ಣಾದ ಅಥವಾ ಅನುಮಾನಾಸ್ಪದ ಬಾಳೆಹಣ್ಣುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






