ಪಡುಬಿದ್ರಿ: ಕಾಪು ತಾಲೂಕಿನ ಪಡುಬಿದ್ರಿ ಬೇಂಗ್ರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 40 ವರ್ಷದ ಯಮನಪ್ಪ ಮಾದರ್ ಎಂಬ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಟಕನಕೇರಿ ನಿವಾಸಿಯಾಗಿರುವ ಯಮನಪ್ಪ, ಕಳೆದ ನಾಲ್ಕು ವರ್ಷಗಳಿಂದ ಪತ್ನಿ ಬಸಮ್ಮ ಹಾಗೂ ಮಕ್ಕಳೊಂದಿಗೆ ಪಡುಬಿದ್ರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಮನೆ ಖರ್ಚಿಗೆ ಹಣ ನೀಡದೆ ಆಗಾಗ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ.
ಆ.9ರಂದು ಬೆಳಗ್ಗೆ 7.30ಕ್ಕೆ ಕೆಲಸಕ್ಕೆಂದು ಮನೆಯಿಂದ ತೆರಳಿದ ಯಮನಪ್ಪ ಬಳಿಕ ಮನೆಗೆ ವಾಪಸ್ ಬಂದಿಲ್ಲ. ಪತ್ನಿ ಕೆಲಸದ ಸ್ಥಳಗಳು ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಇದೇ ರೀತಿಯಾಗಿ ನಾಲ್ಕು ವರ್ಷಗಳ ಹಿಂದೆ ಕೂಡ ಯಮನಪ್ಪ ಮನೆ ಬಿಟ್ಟು ಹೋಗಿ 15 ದಿನಗಳ ಬಳಿಕ ವಾಪಸ್ ಬಂದಿದ್ದರೆಂದು ಪತ್ನಿ ತಿಳಿಸಿದ್ದಾರೆ. ಈ ಬಾರಿಯೂ ಸಂಬಂಧಿಕರ ಮನೆಗೆ ತೆರಳಿರಬಹುದು ಎಂದು ಭಾವಿಸಿ ಕೆಲ ದಿನ ದೂರು ನೀಡದೆ ಕಾಯಲಾಗಿತ್ತು.
ಇದೀಗ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






