ಮಣಿಪಾಲ, ಅಕ್ಟೋಬರ್ 31, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮ್ಯಾನಿಟೀಸ್ ಅಂಡ್ ಆರ್ಟ್ಸ್ (MISHA) ವತಿಯಿಂದ “ಅಸಮಾನ ಭವಿಷ್ಯದ ಪ್ರಶ್ನೆ: ಸಮಾಜ, ಪರಿಸರ ಮತ್ತು ಡಿಜಿಟಲ್ ಪರಿವರ್ತನೆಗಳು” ಎಂಬ ವಿಷಯದ ಕುರಿತು ಒಂದು ದಿನದ ಪದವಿ ವಿದ್ಯಾರ್ಥಿಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಆಯೋಜಿಸಲಾಗುತ್ತಿದೆ. 2027ರ ಜನವರಿ 23ರಂದು ಮಣಿಪಾಲದಲ್ಲಿ ನಡೆಯಲಿರುವ ಈ ಗೋಷ್ಠಿಯಲ್ಲಿ ಭಾಗವಹಿಸಲು ಎಲ್ಲ ವಿಭಾಗಗಳಲ್ಲಿ ಓದುತ್ತಿರುವ ಪದವಿ ವಿದ್ಯಾರ್ಥಿಗಳಿಂದ ಸಂಶೋಧನಾ ಪ್ರಬಂಧಗಳ ಸಾರಾಂಶಗಳನ್ನು ಆಹ್ವಾನಿಸಲಾಗಿದೆ.

ಸಮಕಾಲೀನ ಸಮಾಜವನ್ನು ರೂಪಿಸುತ್ತಿರುವ ಪರಸ್ಪರ ಸಂಬಂಧಿತ ಸವಾಲುಗಳ ಕುರಿತು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನಾ ಆಸಕ್ತಿಯನ್ನು ಬೆಳೆಸುವುದು ಈ ವಿಚಾರಗೋಷ್ಠಿಯ ಉದ್ದೇಶವಾಗಿದೆ. ಪರಿಸರ ಬಿಕ್ಕಟ್ಟುಗಳು, ತ್ವರಿತಗತಿಯ ಡಿಜಿಟಲ್ ಪರಿವರ್ತನೆಗಳು, ಮಾನವನ ಕ್ರಿಯಾಶೀಲತೆ ಮತ್ತು ಸಾಮಾಜಿಕ ಕಲ್ಯಾಣದಂತಹ ವಿಚಾರಗಳ ಕುರಿತು ಚರ್ಚೆಗೆ ಈ ಗೋಷ್ಠಿ ವೇದಿಕೆಯಾಗಲಿದೆ. ಪರಿಸರದ ಅವನತಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಾಮಾಜಿಕ ಸಂಬಂಧಗಳನ್ನು, ಅಸ್ಮಿತೆಯನ್ನು, ಸಂಸ್ಕೃತಿ ಹಾಗೂ ಭವಿಷ್ಯದ ಕುರಿತ ನಮ್ಮ ಕಲ್ಪನೆಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು ಈ ವಿಚಾರಗೋಷ್ಠಿಯ ಉದ್ದೇಶವಾಗಿದೆ.
ಹವಾಮಾನ ಬದಲಾವಣೆ ಮತ್ತು ಪರಿಸರ ನ್ಯಾಯ, ಸುಸ್ಥಿರ ಅಭಿವೃದ್ಧಿ, ಆರೋಗ್ಯ, ಸಾಮಾಜಿಕ ಅಸಮಾನತೆ, ಕೃತಕ ಬುದ್ಧಿಮತ್ತೆ, ವಲಸೆ ಮತ್ತು ಸಂಘರ್ಷ, ಸಾಹಿತ್ಯ ಮತ್ತು ಸಿನಿಮಾ, ಸಾಂಸ್ಕೃತಿಕ ವಿನಿಮಯ, ಸ್ಮೃತಿ ಮತ್ತು ಪರಂಪರೆ ಹಾಗೂ ಪರ್ಯಾಯ ಭವಿಷ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ಸಲ್ಲಿಸಬಹುದು.
ಅಂತರಶಿಸ್ತೀಯ ಮತ್ತು ತುಲನಾತ್ಮಕ ಅಧ್ಯಯನಗಳಿಗೂ ಆದ್ಯತೆ ನೀಡಲಾಗುವುದು.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರಾಗಿರುವ ಪದವಿ ವಿದ್ಯಾರ್ಥಿಗಳು 250 ಪದಗಳ ಸಾರಾಂಶವನ್ನು 2026ರ ನವೆಂಬರ್ 15ರೊಳಗೆ events.misha@manipal.edu ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಆಯ್ಕೆಯಾದವರಿಗೆ ನವೆಂಬರ್ 25ರೊಳಗೆ ಮಾಹಿತಿ ನೀಡಲಾಗುತ್ತದೆ. ಪೂರ್ಣ ಪ್ರಬಂಧವನ್ನು (2,000–2,500 ಪದಗಳು) ಸಲ್ಲಿಸಲು ಡಿಸೆಂಬರ್ 30, 2026 ಕೊನೆಯ ದಿನವಾಗಿದೆ. ಆಯ್ಕೆಯಾದ ಸಾರಾಂಶಗಳಿಗೆ ಸಂಬಂಧಿಸಿದಂತೆ ನೋಂದಣಿ ಶುಲ್ಕ ₹250 ನಿಗದಿಪಡಿಸಲಾಗಿದೆ.
ಸಮ್ಮೇಳನದಲ್ಲಿ ಎರಡು ಅತ್ಯುತ್ತಮ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿ ವಿಜೇತರಿಗೆ ವಿದ್ಯಾರ್ಥಿ ಮುಖ್ಯ ಭಾಷಣಗಳನ್ನು ಮಂಡಿಸುವ ಅವಕಾಶವೂ ದೊರೆಯಲಿದೆ. ಇತರ ಊರುಗಳಿಂದ ಆಗಮಿಸುವ ಭಾಗವಹಿಸುವವರಿಗೆ ಎರಡು ರಾತ್ರಿಗಳ ಉಚಿತ ಹಾಸ್ಟೆಲ್ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಬಂಧ ಮಂಡಿಸುವ ಎಲ್ಲರಿಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಪದವಿ ಹಂತದ ವಿದ್ಯಾರ್ಥಿಗಳ ಸಂಶೋಧನೆಯನ್ನು ಉತ್ತೇಜಿಸುವುದು, ವಿವಿಧ ಶೈಕ್ಷಣಿಕ ವಿಭಾಗಗಳ ನಡುವಿನ ಸಂವಾದಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಸಮಾಜ, ಪರಿಸರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಕಾಲೀನ ಸವಾಲುಗಳ ಕುರಿತು ಯುವ ಸಂಶೋಧಕರು ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ವೇದಿಕೆ ಒದಗಿಸುವುದು ಈ ವಿಚಾರಗೋಷ್ಠಿಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಾರಾಂಶ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ events.misha@manipal.edu ಸಂಪರ್ಕಿಸಬಹುದು.
‘ಮಿಷಾ’ ಕುರಿತು
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಭಾಗವಾಗಿರುವ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮ್ಯಾನಿಟೀಸ್ ಅಂಡ್ ಆರ್ಟ್ಸ್ (MISHA), ಸಮಾಜ ವಿಜ್ಞಾನ, ಮಾನವಿಕ ಶಾಸ್ತ್ರ ಮತ್ತು ಕಲೆಗಳ ಕ್ಷೇತ್ರಗಳಲ್ಲಿ ಅಂತರಶಿಸ್ತೀಯ ಅಧ್ಯಯನ ಹಾಗೂ ಸಂವಾದವನ್ನು ಉತ್ತೇಜಿಸುವ ಶೈಕ್ಷಣಿಕ ಸಂಸ್ಥೆಯಾಗಿದೆ.






