ಮಣಿಪಾಲ: ಅಮೆಜಾನ್ ಆನ್‌ಲೈನ್ ಡೆಲಿವರಿ ಹಬ್ ಫ್ರಾಂಚೈಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹4.20 ಲಕ್ಷ ಹಣ ಪಡೆದು ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕೂರು ಗ್ರಾಮದ ರವಿಚಂದ್ರ (48) ಅವರು ನೀಡಿದ ದೂರಿನಂತೆ, ಜೂನ್ 29ರಂದು ಎಂ. ಸಾಯಿಕೃಷ್ಣ ಎಂಬವರು ಕರೆ ಮಾಡಿ ಉಡುಪಿ–ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಅಮೆಜಾನ್ ಕಂಪನಿಯ ಆನ್‌ಲೈನ್ ಹಬ್ ಫ್ರಾಂಚೈಸಿ ಮಾಡಿಸಿಕೊಡುವುದಾಗಿ ತಿಳಿಸಿದ್ದರು. ಆರಂಭದಲ್ಲಿ ರವಿಚಂದ್ರ ಅವರು ಫ್ರಾಂಚೈಸಿ ಬೇಡವೆಂದು ಹೇಳಿ ಕರೆ ಕಡಿತಗೊಳಿಸಿದ್ದರು.
ನಂತರ ಮತ್ತೆ ಕರೆ ಮಾಡಿದ ಆರೋಪಿಗಳು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಕಂಪನಿಯ ಫೀಲ್ಡ್ ಆಫೀಸರ್ ಸ್ಥಳಕ್ಕೆ ಭೇಟಿ ನೀಡಿ ಒಪ್ಪಂದ ಹಾಗೂ ಏರಿಯಾ ಪಿನ್‌ಕೋಡ್ ಲಾಕಿಂಗ್ ಮಾಡಿಕೊಡುತ್ತಾರೆ ಎಂದು ನಂಬಿಸಿದ್ದಾರೆ.
ಎಂ. ಸಾಯಿಕೃಷ್ಣ, ಎಂ. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಹಾಗೂ ಮಹೇಶ್ ಎಂಬವರು ಸೇರಿಕೊಂಡು ಫ್ರಾಂಚೈಸಿ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ರವಿಚಂದ್ರ ಅವರಿಂದ ಒಟ್ಟು ₹4,20,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







