ಶಂಕರನಾರಾಯಣ, ಮಾ. 25: ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಶ್ರೀಧರ ಆಚಾರ್ಯ (53) ಎಂದು ಗುರುತಿಸಲಾಗಿದೆ. ಇವರ ಸಹೋದರ ಶ್ಯಾಮ ಆಚಾರ್ಯ (55) ಅವರು ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 24 ರಂದು ಮಧ್ಯಾಹ್ನ ಸುಮಾರು 1:30ರ ವೇಳೆ ಊಟ ಮಾಡಿದ ಬಳಿಕ ಶ್ರೀಧರ ಅವರು ಮನೆಯ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಈ ವೇಳೆ ಅವರು ರಕ್ತ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ಜಾರಿರುವುದನ್ನು ಮಧ್ಯಾಹ್ನ 2:30ರ ಸುಮಾರಿಗೆ ಅವರ ಪತ್ನಿ ಗಮನಿಸಿ ಕುಟುಂಬ ಸದಸ್ಯರಿಗೆ ತಿಳಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಹೋದರ ಶ್ಯಾಮ ಆಚಾರ್ಯ ಅವರು ಪರಿಶೀಲಿಸಿದಾಗ ಯಾವುದೇ ಪ್ರತಿಕ್ರಿಯೆ ಕಾಣಿಸದ ಹಿನ್ನೆಲೆಯಲ್ಲಿ ಅವರನ್ನು ಬೆಳ್ವೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ವೈದ್ಯರು ಪರಿಶೀಲಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







