ಕುಂದಾಪುರ, ಫೆ. 25: ಕಂಡ್ಲೂರು ಪೇಟೆಯ ಸೆಲೂನ್‌ನಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನಿಂದ ಹೇಳಿಕೆ ಪಡೆಯಲಾಗಿದ್ದ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಕಂಡ್ಲೂರು ಜನತಾ ಕಾಲನಿಯ ಶಶಾಂಕ್ ಭಂಡಾರಿ (30) ಮತ್ತು ಕಾವ್ರಾಡಿ ಗ್ರಾಮದ ಮರಾಸಿಯ ಪ್ರಮೋದ ಡಿ’ಸೋಜಾ (25) ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ತಂದೆ ನೀಡಿದ ದೂರಿನ ಆಧಾರದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಜೊತೆಗೆ, ಸೆಲೂನ್ ಎದುರು ಕೆಲವರು ಗುಂಪುಗೂಡಿ ಬೆದರಿಕೆ ಹಾಕಿದ ಬಗ್ಗೆ ಸೆಲೂನ್ ಮಾಲಕರಿಂದ ಮತ್ತೊಂದು ದೂರು ದಾಖಲಾಗಿದ್ದು, ಅದಕ್ಕೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ 20ರಿಂದ 30 ಮಂದಿ ಭಾಗಿಯಾಗಿರುವುದಾಗಿ ಗುರುತಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







