ಮಂಗಳೂರು, ಫೆ. 25: ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ತೋಟಬೆಂಗ್ರೆಯ ನಿವಾಸಿ ಶಾನೇಶ್ (25) ಅವರು ಫೆಬ್ರವರಿ 18ರಿಂದ ಕಾಣೆಯಾಗಿರುವ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದವರ ಮಾಹಿತಿಯ ಪ್ರಕಾರ, ಶಾನೇಶ್ ಕಳೆದ ನಾಲ್ಕು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮೊದಲು ಹಲವು ಬಾರಿ ಮನೆ ಬಿಟ್ಟು ತೆರಳಿ ಎರಡು-ಮೂರು ದಿನಗಳ ಬಳಿಕ ಮರಳಿ ಬಂದಿದ್ದ ಘಟನೆಗಳಿವೆ. ಆದರೆ ಫೆ.18ರಂದು ಮನೆಯಿಂದ ಹೊರಟ ಅವರು ಇದುವರೆಗೆ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾನೇಶ್ ಸುಮಾರು 5.6 ಅಡಿ ಎತ್ತರ ಹೊಂದಿದ್ದು, ಗೋಧಿ ಮೈಬಣ್ಣ ಮತ್ತು ಸಪೂರ ದೇಹ ಹೊಂದಿದ್ದಾರೆ. ಅವರು ಮನೆ ಬಿಡುವಾಗ ಬಿಳಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಉದ್ದತೋಳಿನ ಶರ್ಟ್ ಧರಿಸಿದ್ದರು. ತಮಿಳು, ತುಳು ಮತ್ತು ಕನ್ನಡ ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ.
ಈ ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.







