ನವದೆಹಲಿ, ಫೆ. 23: ಚಹಾ ಕಾಫಿ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಡೆ ಯುಪಿಐ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಮಹತ್ವದ ಮಾಹಿತಿ. ಮಾರ್ಚ್ 1, 2026ರಿಂದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊರಡಿಸಿರುವ ತಾಜಾ ಮಾರ್ಗಸೂಚಿಗಳಂತೆ, ಪಾವತಿ ವಿಧಾನಗಳ ಜೊತೆಗೆ ಬ್ಯಾಲೆನ್ಸ್ ಪರಿಶೀಲನೆಗೂ ಮಿತಿಯನ್ನು ವಿಧಿಸಲಾಗಿದೆ. ವಹಿವಾಟುಗಳ ಸುರಕ್ಷತೆ ಹೆಚ್ಚಿಸುವುದು ಮತ್ತು ಬ್ಯಾಂಕ್ ಸರ್ವರ್‌ಗಳ ಮೇಲಿನ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡುವುದೇ ಈ ಕ್ರಮದ ಉದ್ದೇಶವಾಗಿದೆ.
ಬ್ಯಾಲೆನ್ಸ್ ಪರಿಶೀಲನೆಗೆ ದಿನಸಿ ಮಿತಿ
ಇಲ್ಲಿಯವರೆಗೆ ಬಳಕೆದಾರರು ದಿನದಲ್ಲಿ ಅನಿಯಮಿತ ಬಾರಿ ಖಾತೆ ಶೇಷವನ್ನು ಪರಿಶೀಲಿಸಬಹುದಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ, ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮುಂತಾದ ಒಂದೇ ಅಪ್ಲಿಕೇಶನ್ ಮೂಲಕ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಪರಿಶೀಲನೆ ಮಾಡಲು ಅವಕಾಶ ಇರುತ್ತದೆ. ಆಗಾಗ್ಗೆ ಬ್ಯಾಲೆನ್ಸ್ ಚೆಕ್ ಮಾಡುವುದರಿಂದ ಬ್ಯಾಂಕ್‌ಗಳ ಸರ್ವರ್‌ಗಳ ಮೇಲೆ ಒತ್ತಡ ಹೆಚ್ಚಾಗಿ, ವ್ಯವಹಾರ ವಿಫಲವಾಗುವ ಸಾಧ್ಯತೆಗಳು ಏರುತ್ತವೆ ಎಂಬ ಕಾರಣದಿಂದ ಈ ಮಿತಿ ವಿಧಿಸಲಾಗಿದೆ.
ವಹಿವಾಟು ಮಿತಿ ಹಾಗೆಯೇ; ವಿಶೇಷ ಉದ್ದೇಶಗಳಿಗೆ ವಿನಾಯಿತಿ
ಸಾಮಾನ್ಯ ಯುಪಿಐ ವ್ಯವಹಾರಗಳ ದೈನಂದಿನ ಗರಿಷ್ಠ ಮಿತಿ ₹1 ಲಕ್ಷವಾಗಿಯೇ ಮುಂದುವರಿಯುತ್ತದೆ. ಆದರೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹಾಗೂ ಐಪಿಒ ಹೂಡಿಕೆಗಳಂತಹ ನಿರ್ದಿಷ್ಟ ವ್ಯವಹಾರಗಳಿಗೆ ಹೆಚ್ಚಿನ ಮಿತಿಯನ್ನು ಅನುಮತಿಸಲಾಗಿದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ಭದ್ರತೆಯನ್ನು ಗಟ್ಟಿಗೊಳಿಸಲು ಹೊಸ ಬ್ಯಾಂಕ್ ಖಾತೆಯನ್ನು ಅಪ್ಲಿಕೇಶನ್‌ಗೆ ಸೇರಿಸಿದ ಬಳಿಕ ಮೊದಲ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ₹5,000 ವರೆಗೆ ಮಾತ್ರ ಹಣ ವರ್ಗಾಯಿಸಲು ಅವಕಾಶ ಇರಲಿದೆ.
ಮುಂದಿನ ಹಂತದಲ್ಲಿ, 2028ರ ಏಪ್ರಿಲ್ 1ರಿಂದ ಎರಡು ಹಂತದ ದೃಢೀಕರಣ (Two-Factor Authentication) ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ವಂಚನೆಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.







