ಮಂಗಳೂರು, ಫೆ. 13 : ಕೋಟೆಕಾರಿನ ಅಡ್ಕದಲ್ಲಿ ಗುರುವಾರ ಚಲಿಸುತ್ತಿದ್ದ ಓಮ್ನಿ ವ್ಯಾನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಹಿಂದಿನಿಂದ ಬರುತ್ತಿದ್ದ ವಾಹನ ಸವಾರರ ಎಚ್ಚರಿಕೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ತಲಪಾಡಿ ನಿವಾಸಿ ರಿಯಾಜ್ ಅವರು ಮಧ್ಯಾಹ್ನ ಅಡ್ಕದ ಗ್ಯಾರೇಜ್‌ನಿಂದ ರಿಪೇರಿ ಮುಗಿದ ತಮ್ಮ ವ್ಯಾನ್ ಅನ್ನು ತೆಗೆದುಕೊಂಡು ಹೊರಟಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಂಡು ತಲಪಾಡಿಯತ್ತ ಪ್ರಯಾಣಿಸುತ್ತಿದ್ದಾಗ ವ್ಯಾನ್‌ನಿಂದ ಹೊಗೆ ಏಳಲು ಆರಂಭವಾಗಿದೆ. ಆದರೆ ವಾಹನಕ್ಕೆ ಬೆಂಕಿ ತಗುಲಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ಸವಾರರು ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣವೇ ರಿಯಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ರಿಯಾಜ್ ಅವರು ಹೈವೇ ಪಕ್ಕದಲ್ಲಿ ವಾಹನ ನಿಲ್ಲಿಸಿ ಹೊರಬಂದಿದ್ದಾರೆ. ಅವರು ವಾಹನದಿಂದ ಇಳಿಯುತ್ತಿದ್ದಂತೆಯೇ ಇಡೀ ವ್ಯಾನ್ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.







