ಮಂಗಳೂರು, ಫೆ. 13: ಕರಾವಳಿ ಭಾಗದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಡಬೇಕು ಎಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಮೂರೂ ಜಿಲ್ಲೆಗಳ ಸಚಿವರು ಮತ್ತು ಶಾಸಕರು ಪಾಲ್ಗೊಂಡು, ಕರಾವಳಿಯ ಸಮಗ್ರ ಪ್ರಗತಿಗೆ ಆದ್ಯತೆ ನೀಡಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅಭಿಪ್ರಾಯಪಟ್ಟರು.
ಖಾದರ್ ಮಾತನಾಡಿ, ಕಡಲ್ಗೊರೆತ ನಿಯಂತ್ರಣಕ್ಕೆ ತೀರ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಎತ್ತರದಲ್ಲಿ ನಿರ್ಮಿಸಿದರೆ ಕೊರೆತ ತಡೆಯುವುದರೊಂದಿಗೆ ಸಂಚಾರ ವ್ಯವಸ್ಥೆ ಸುಧಾರಣೆಗೂ ಸಹಕಾರಿಯಾಗಲಿದೆ. ಇದು ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಪಶ್ಚಿಮ ವಾಹಿನಿ ಯೋಜನೆಗೆ ಇನ್ನಷ್ಟು ಅನುದಾನ ಅಗತ್ಯವಿದೆ. ಉಳ್ಳಾಲ ಕೋಟೆಪುರ ಜೆಟ್ಟಿ ನಿರ್ಮಾಣದಿಂದ ಬಂದರಿನ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದರು.
ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಕರಾವಳಿಯ 13 ಮೀನುಗಾರಿಕೆ ಬಂದರುಗಳ ವ್ಯಾಪ್ತಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಅನುದಾನ ಸಿಗುವ ನಿರೀಕ್ಷೆ ಇದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸ್ಥಳಗಳಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಕೈಗೆತ್ತಿಕೊಳ್ಳಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಡಳ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸಲು ಒತ್ತು ನೀಡಬೇಕು. ಪ್ರವಾಸೋದ್ಯಮ ಉತ್ತೇಜನಕ್ಕೆ ವಾಟರ್‌ವುಟ್ರೋ ಯೋಜನೆಯನ್ನು ಜಾರಿಗೆ ತರಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಇಡಬೇಕು ಎಂದರು.
ಶಾಸಕ ಕಿರಣ್ ಕೊಡ್ಲಿ ಮಾತನಾಡಿ, ಕರಾವಳಿ ನಿಯಂತ್ರಣ ವಲಯ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಿ, ಮಂಗಳೂರು ಅಥವಾ ಉಡುಪಿ ಯಲ್ಲಿ ಸ್ಥಾಪಿಸಬೇಕು. ಇದರಿಂದ ವಿವಿಧ ಸಿಆರ್‌ಝಡ್ ಸಂಬಂಧಿತ ಅನುಮತಿ ಗಳಿಗೆ ದೀರ್ಘ ಕಾಲ ಕಾಯು ವುದು ತಪ್ಪಲಿದೆ. ಕರಾವಳಿಯಲ್ಲಿ ಕೃಷಿ ವಿ.ವಿ. ಅಗತ್ಯವಿದ್ದು, ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕಾಲೇಜನ್ನು ವಿ.ವಿ. ಆಗಿ ಮೇಲ್ದರ್ಜೆಗೇರಿಸಬಹುದಾಗಿದೆ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮೀನುಗಾರಿಕೆ ಮತ್ತು ಬಂದರು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ. ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ, ಎಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು. ಇದರಿಂದ ಬಂದರು ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸಬಹುದು ಎಂದರು.
ಅಳಿವೆಗಳ ಹೂಳೆತ್ತಲು ಡ್ರೆಜ್ಜಿಂಗ್ ಮಾಡಲು ಗುತ್ತಿಗೆ ಪ್ರಕ್ರಿಯೆ ವಿಳಂಬ ವಾಗುತ್ತಿದೆ. ಡ್ರೆಜ್ಜಿಂಗ್ ಗುತ್ತಿಗೆ ನೀಡುವ ಬದಲು ರಾಜ್ಯ ಸರಕಾರವೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು. ದೇಶದ ಪಶ್ಚಿಮ ಕರಾವಳಿಯಲ್ಲಿ ಸಮಾನ ಮೀನುಗಾರಿಕಾ ನೀತಿ ಜಾರಿಯಾಗಬೇಕು. ಪ್ರಸ್ತುತ ಮೀನುಗಾರಿಕೆ ರಜೆ ಸೇರಿದಂತೆ ಒಂದೊಂದು ರಾಜ್ಯದಲ್ಲಿ ವಿಭಿನ್ನ ನೀತಿಗಳಿದ್ದು, ಕರ್ನಾಟಕದ ಮೀನುಗಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ | ಧನಂಜಯ ಸರ್ಜಿ ಮಾತನಾಡಿ, ಕ್ಯಾನ್ಸರ್‌ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಉನ್ನತ ಸರಕಾರಿ ಆಸ್ಪತ್ರೆ ಕರಾವಳಿಯಲ್ಲಿ ಅಗತ್ಯವಿದೆ. ಇದರಿಂದ ಮಿತದರದಲ್ಲಿ ಸಾರ್ವಜನಿಕರಿಗೆ ಉನ್ನತ ಚಿಕಿತ್ಸೆ ದೊರಕಲಿದೆ. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕರಾವಳಿಗೆ ಬರುತ್ತಿರುವುದರಿಂದ ಹಾಸ್ಟೆಲ್‌ಗಳನ್ನು ಹೆಚ್ಚು ಸ್ಥಾಪಿಸಬೇಕು ಎಂದು ಅವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ರಬ್ಬರ್ ಬೆಳೆಗೆ ನಿರ್ದಿಷ್ಟ ಸ್ಥಾನಮಾನ ನೀಡಬೇಕು. ಕಡಬ ತಾಲೂಕಿನ ಕೊಲ್ಯದಲ್ಲಿ ನಿಮಿಸಿರುವ ಪಶುಸಂಗೋಪನಾ ಕಾಲೇಜಿಗೆ ಬೋಧಕ ಹುದ್ದೆಗಳನ್ನು ಮಂಜೂರುಗೊಳಿಸಬೇಕು. ಕಡಬ ತಾಲೂಕಿಗೆ ಹಲವು ಇಲಾಖೆಗಳು ಬಂದಿಲ್ಲ. ಸಾರ್ವಜನಿಕರು ದಾಖಲೆಗಳಿಗಾಗಿ ಪುತ್ತೂರಿಗೆ ತೆರಳಬೇಕಾಗಿದೆ ಎಂದರು.
ಶಾಸಕ ಡಾ| ಭರತ್ ಶೆಟ್ಟಿ ಮಾತನಾಡಿ, ನಗರದಲ್ಲಿ ರಾಜಕಾಲುವೆಗಳು ನದಿ ಸೇರುವ ಸ್ಥಳಗಳಲ್ಲಿ ಡ್ರೆಜ್ಜಿಂಗ್ ಆಗದೇ, ಮಳೆಗಾಲದಲ್ಲಿ ನೆರೆ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇದು ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಪ್ರಸ್ತಾವಿಸಿ, ಕರಾವಳಿಯ ಪ್ರಮಖ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಪ್ರಸ್ತಾವನೆ ಕಳುಹಿಸಲಾಗುವುದು. ಇಂದಿನ ಸಭೆಯ ಅಂಶಗಳನ್ನು ಮಂಡಳಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ, ಅನು ದಾನಕ್ಕೆ ಬೇಡಿಕೆ ಇಡಲಾಗುವುದು ಎಂದರು.
ಜಿಲ್ಲಾಧಿಕಾರಿ ದರ್ಶನ್ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ, ಅಧಿಕಾರಿಗಳಾದ ಮಂಜು ನಾಥ ಶೆಟ್ಟಿ, ಶ್ರೀಧರ್‌ಟಿ.ಡಿ. ಮುಹಮ-¾ದ್ ತೌಸೀಫ್, ಹರಿಹರ ವಿ. ಹರಿಕಾಂತ್, ಪವನ್ ಕುಮಾರ್ ಇದ್ದರು.







