ಮಂಗಳೂರು:ಕದ್ರಿ ಸಂಚಾರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಸತೀಶ್ ಪ್ರಸಾದ್ (30), ನಗರದ ಕೆಪಿಟಿ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸು ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.
ಕೆಪಿಟಿ ಜಂಕ್ಷನ್ ನಲ್ಲಿ ಸಂಚಾರ ನಿಯಂತ್ರಣ ಕೆಲಸ ಮಾಡುತ್ತಿದ್ದಾಗ ನಂತೂರು ಕಡೆಯಿಂದ ಬೊಂದೇಲ್ ಕಡೆಗೆ ಸಾಗುತ್ತಿದ್ದ ಸಿಟಿ ಬಸ್ಸನ್ನು ಚಾಲಕ ಶಿವ ಕುಮಾರ್ ಎಂಬಾತ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸತೀಶ್ ಅವರ ತಲೆಗೆ, ಬಲ ಕೈ ಮಣಿಗಂಟಿಗೆ ಗಾಯವಾಗಿದ್ದು, ಮೂಳೆ ಮುರಿತವಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಸಿಬಂದಿಯ ದೂರಿನನ್ವಯ ಬಸ್ಸು ಚಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






