ಬೆಂಗಳೂರು ಜ.24 : ರಾಜ್ಯದಲ್ಲಿ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಮಟ್ಟದ ಸಾಲ ವಿತರಣೆಯಾಗಿದೆ.
ಕೃಷಿ ಚಟುವಟಿಕೆ ಪ್ರೋತ್ಸಾಹಿಸಲು ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಯ ಜೀವನಾಡಿಯಾದ ಸಹಕಾರ ವಲಯದ ಬಲವರ್ಧನೆಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು 2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು.
ಸಹಕಾರ ಸಾಲ ಸಂರಚನೆಯ ಬಲವರ್ಧನೆಗಾಗಿ ನಬಾರ್ಡ್, ರಾಜ್ಯ ಸರಕಾರ ಮತ್ತು ಅಪೆಕ್ಸ್ ಬ್ಯಾಂಕ್ ಒಡಂಬಡಿಕೆ ಮಾಡಿಕೊಂಡಿವೆ. ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಶೇ.3ರ ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗೆ198 ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ನೀಡುವ ಯೋಜನೆ ಜಾರಿಗೊಳಿಸಲಾಗಿದೆ
ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಪಿಕಾರ್ಡ್ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಕೃಷಿ ಚಟುವಟಿಕೆಗೆ ಮಾತ್ರವಲ್ಲದೆ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ 5 ಲಕ್ಷ ರೂ.ವರೆಗೆ ಸಾಲ ಕೊಡಲಾಗಿದೆ. ಶೂನ್ಯ ಬಡ್ಡಿ ಸಾಲ ಪಡೆದ ರೈತರು 365 ದಿನಗಳ ಅವಧಿಯಲ್ಲಿ ಸಾಲ ಮರುಪಾವತಿಸಿ ಮತ್ತೆ ಬೆಳೆ ಸಾಲ ಪಡೆಯಬಹುದು…






