ಕಾರ್ಕಳ: ಸಾಹಿತ್ಯವು ಸಮಾಜದ ಅಂತರಾಳದ ಧ್ವನಿಯಾಗಿದ್ದು, ಜನಜೀವನದ ನೋವು-ನಲಿವುಗಳನ್ನು ಪ್ರತಿಬಿಂಬಿಸುವ ಶಕ್ತಿಯಾಗಿದೆ. ಡಿಜಿಟಲ್ ಯುಗದಲ್ಲಿ ಭಾಷೆಯ ರೂಪ ಬದಲಾಗುತ್ತಿದ್ದರೂ, ಅದರ ಮೂಲ ಮೌಲ್ಯಗಳನ್ನು ಕಾಪಾಡಿಕೊಂಡು ಮುಂದುವರಿಯಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವಾಸುದೇವ ಭಟ್ ಹೇಳಿದರು.
ಅವರು ಕಾರ್ಕಳದ ಕ್ರಿಯೆಟಿವ್ ಪದವಿ ಪೂರ್ವ ಕಾಲೇಜಿನಲ್ಲಿ, ನ್ಯಾಯವಾದಿ ದಿ. ಎಂ.ಕೆ. ವಿಜಯಕುಮಾರ್ ವೇದಿಕೆಯಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಕಾರ್ಕಳವು ಕೇವಲ ಭೌಗೋಳಿಕ ಪ್ರದೇಶವಲ್ಲ; ಸಂಸ್ಕೃತಿ, ಪರಂಪರೆ ಹಾಗೂ ಭಾಷಾ ವೈವಿಧ್ಯತೆಯ ಸಂಗಮಭೂಮಿಯಾಗಿದ್ದು, ಇಲ್ಲಿನ ನೆಲ-ಜಲ-ಜನ ಸಾಹಿತ್ಯಕ್ಕೆ ಸದಾ ಪ್ರೇರಣೆಯಾಗಿವೆ ಎಂದರು.
ಇಂದಿನ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ತಂತ್ರಜ್ಞಾನವನ್ನು ವಿರೋಧಿಸುವ ಬದಲು ಭಾಷೆಯ ಸೇವೆಗೆ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಸಮಾಜದಿಂದ ದೂರ ಉಳಿಯಬಾರದು; ರೈತ, ಕಾರ್ಮಿಕ, ಮಹಿಳೆ, ಯುವಕರ ಬದುಕಿನ ಪ್ರಶ್ನೆಗಳು ಬರಹಗಳಲ್ಲಿ ಪ್ರತಿಫಲಿಸಬೇಕು ಎಂದರು.
ಯುವ ಬರಹಗಾರರಿಗೆ ಕರೆ ನೀಡಿದ ಅವರು, ಸ್ಥಳೀಯ ನೆಲೆಯ ಕಥನವೇ ವಿಶ್ವಮಾನವೀಯತೆಗೆ ದಾರಿ ಮಾಡಿಕೊಡುತ್ತದೆ. ಕಾರ್ಕಳದ ಮಣ್ಣಿನ ವಾಸನೆ ಹೊತ್ತ ಸಾಹಿತ್ಯ ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆಯಬಲ್ಲದು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ, ಚಿಂತನೆ ಹಾಗೂ ಸಂವಾದದ ವೇದಿಕೆಯಾಗಬೇಕು. ಇಂತಹ ವೇದಿಕೆಗಳು ಕನ್ನಡ ಸಾಹಿತ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಲು ಸಹಕಾರಿಯಾಗುತ್ತವೆ ಎಂದು ವಾಸುದೇವ ಭಟ್ ಹೇಳಿದರು.
ಕಾರ್ಯಕ್ರಮವನ್ನು ಶಾಸಕ ವಿ. ಸುನಿಲ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಾಹಿತ್ಯ ಸಮ್ಮೇಳನಗಳು ಭೋಜನ ಕೂಟದ ಬಗ್ಗೆ ಹೆಚ್ಚು ಪ್ರಚಾರ ಪಡೆಯುತ್ತಿವೆ. ಸಾಹಿತ್ಯ ಪರಿಷತ್, ಸಮ್ಮೇಳನಗಳಲ್ಲಿ ವಿಮರ್ಶೆ ಅಗತ್ಯ. ಅಧಿವೇಶನದಲ್ಲಿ 2 ತಾಸು ಮಾತನಾಡಿದ್ದು ಸುದ್ದಿಯಾಗಲಿಲ್ಲ. ಆದರೆ ಎರಡು ಒಂದು ವಾಕ್ಯ ಹಾಡು ಹೇಳಿದ್ದು ಭಾರಿ ಚರ್ಚೆ ಆಯಿತು. ಕಾರಣ ಹಾಡಿನ ಸಾಹಿತ್ಯಕ್ಕೆ ಅಷ್ಟು ಶಕ್ತಿ ಇದೆ. ಎನ್ನುವುದು ಗೊತ್ತಾಗುತ್ತಿದೆ ಎಂದರು.
ಶ್ರೀ ಭವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡ ಅವರು ಡಾ. ಮಾಲತಿ ಜಿ. ಪ್ರಭು ಅವರ ‘ನನ್ನೊಳಗಿನ ನಾನು’ ಹಾಗೂ ಆರ್. ರಮೇಶ್ ಪ್ರಭು ಅವರ ‘ಮನದಾಳದ ಮುತ್ತುಗಳು’ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಸ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಚಾಲನೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಜನಪದ ವಿದ್ವಾಂಸ ಪ್ರೊ. ಕೆ. ಗುಣಪಾಲ ಕಡಂಬ, ಕವಿ, ಸಾಹಿತಿ ದುಂಡಿರಾಜ್, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್. ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್,, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ನ್ಯಾಯವಾದಿ ಎಂ.ಕೆ ಸುವೃತ್ ಕುಮಾರ್, ನಿತ್ಯಾನಂದ ಪೈ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪರಿಷತ್ ಧ್ವಜಾರೋಹಣಗೈದರು.
ಗಣೇಶ್ ಜಾಲ್ಕೂರು, ಕ್ರಿಯೆಟಿವ್ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ್ ಹಾಗೂ ನಿರ್ವಹಣಾಧಿಕಾರಿ ಸುನಿಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕ ನಾಗೇಶ್ ನಲ್ಲೂರು ನಿರೂಪಿಸಿದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು.
ಅದ್ದೂರಿ ಮೆರವಣಿಗೆ
ಜೋಡುರಸ್ತೆ ಕ್ರಿಯೆಟಿವ್ ಪುಸ್ತಕ ಮನೆ ಮುಂಭಾಗ ಸಮ್ಮೇಳನದ ನೆರವಣಿಗೆಗೆ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು. ಸ್ಥಳೀಯ ಸಾಂಸ್ಕೃತಿಕ ತಂಡಗಳು, ತಾಲೂಕಿನ ಸೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ತಂಡಗಳು, ಕ್ರಿಯೆಟಿವ್ ಕಾಲೇಜು ವಿದ್ಯಾರ್ಥಿಗಳ ವೇಷಭೂಷಣ, ಚೆಂಡೆ ಮತ್ತು ಗೊಂಬೆ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಸಮ್ಮೇಳನದ ನಿಮಿತ್ತ ಕ್ರಿಯೆಟಿವ್ ಕಾಲೇಜು ಆವರಣ ಸಂಪೂರ್ಣವಾಗಿ ಕನ್ನಡಮಯವಾಗಿ ಕಂಗೊಳಿಸಿತು.






