ಮಂಗಳೂರು: ಡೆಲಿವರಿ ಟ್ರ್ಯಾಕಿಂಗ್ ಸಂದೇಶವೆಂದು ನಂಬಿ ಅಪರಿಚಿತರು ಕಳುಹಿಸಿದ APK ಲಿಂಕ್ ಕ್ಲಿಕ್ ಮಾಡಿದ ಮಂಗಳೂರಿನ ಕಂಪನಿಯೊಂದರ ಹಿರಿಯ ಕೆಮಿಸ್ಟ್‌ರೊಬ್ಬರು ₹1,18,707 ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಮಂಗಳೂರಿನ ಕಂಪನಿಯೊಂದರಲ್ಲಿ ಹಿರಿಯ ಕೆಮಿಸ್ಟ್ ಆಗಿ ಕೆಲಸ ಮಾಡುತ್ತಿರುವ 38 ವರ್ಷದ ವ್ಯಕ್ತಿಯೊಬ್ಬರು, ತಮ್ಮ ಕಂಪನಿಗೆ ಅಗತ್ಯವಿದ್ದ ಕೆಮಿಕಲ್ ಹೋಲ್ಡರ್‌ಗಾಗಿ ಖಾನ್‌ಪುರದ ಗೇಲ್ ಇಂಡಿಯಾ ಕಂಪನಿಗೆ ಅಕ್ಟೋಬರ್ 1ರಂದು ಆರ್ಡರ್ ನೀಡಿದ್ದರು.
ಅಕ್ಟೋಬರ್ 5ರಂದು ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಅಪರಿಚಿತರು 9835417309 ಹಾಗೂ 7978171089 ಸಂಖ್ಯೆಗಳ ಮೂಲಕ APK ಫೈಲ್ ಲಿಂಕ್ ಕಳುಹಿಸಿದ್ದರು. ಕೆಮಿಕಲ್ ಹೋಲ್ಡರ್‌ನ ಡೆಲಿವರಿ ಟ್ರ್ಯಾಕಿಂಗ್ ಸಂದೇಶವೆಂದು ನಂಬಿದ ಅವರು ಲಿಂಕ್ ಕ್ಲಿಕ್ ಮಾಡಿದ್ದಾರೆ. ಈ ವೇಳೆ ಮೊಬೈಲ್‌ನಲ್ಲಿ ಅಪರಿಚಿತ ಆ್ಯಪ್ ತೆರೆದುಕೊಂಡಿದ್ದು, ಅದರಲ್ಲಿ ತಮ್ಮ ಹೆಸರು ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಅವರ ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ಒಟ್ಟು ₹1,18,707 ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡೆಲಿವರಿ ಟ್ರ್ಯಾಕಿಂಗ್ ಹೆಸರಿನಲ್ಲಿ APK ಲಿಂಕ್ ಕಳುಹಿಸಿ ಆನ್‌ಲೈನ್ ಮೂಲಕ ಹಣ ವಂಚಿಸಿದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಮಂಗಳೂರಿನ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಅಪರಿಚಿತರು ಕಳುಹಿಸುವ APK ಫೈಲ್ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಡೆಲಿವರಿ ಮಾಹಿತಿ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಬಳಸಿ. ಅಪರಿಚಿತ ಆ್ಯಪ್‌ಗಳಲ್ಲಿ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಬೇಡಿ.







