ಮಂಗಳೂರು: ನಗರದ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಕ್ಟೋಬರ್ 17ರಂದು ಸಂಜೆ ನಡೆದಿದೆ.
ಗಾಯಾಳುವನ್ನು ಪೃಥ್ವಿರಾಜ್ (52) ಎಂದು ಗುರುತಿಸಲಾಗಿದೆ. ಇವರು ಸಂಜೆ ಸುಮಾರು 6:30ರ ವೇಳೆಗೆ ಸಯ್ಯದ್ ಮದನಿ ದರ್ಗಾದ ಬಳಿಯಿಂದ ನೆಹರೂ ಮೈದಾನದ ಕಡೆಗೆ ರಸ್ತೆ ದಾಟುತ್ತಿದ್ದಾಗ, ಎ.ಬಿ. ಶೆಟ್ಟಿ ಸರ್ಕಲ್ ಕಡೆಯಿಂದ ಎಸ್.ಪಿ. ವೃತ್ತದ ಕಡೆಗೆ ತೆರಳುತ್ತಿದ್ದ 43ನೇ ರೂಟ್‌ನ ಬಸ್ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಸ್ ಚಾಲಕ ಅಬ್ದುಲ್ ರಹಿಮಾನ್ ಅವರು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಪೃಥ್ವಿರಾಜ್ ಅವರ ತಲೆಗೆ ಗಂಭೀರ ಒಳಪೆಟ್ಟು ಉಂಟಾಗಿದೆ.
ಬಸ್ಸಿನ ಪ್ರಯಾಣಿಕ ಮನೋಜ್ ಹಾಗೂ ಚಾಲಕ ಮತ್ತು ನಿರ್ವಾಹಕರು ಗಾಯಾಳುವನ್ನು ಉಪಚರಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎ.ಜೆ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಪೃಥ್ವಿರಾಜ್ ಅವರ ಸಹೋದರ ಪ್ರವೀಣ್ ರಾಜ್ ಅವರು ಮಂಗಳೂರು ವೆಸ್ಟ್ ಟ್ರಾಫಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







