ಧಾರವಾಡ, ಅಕ್ಟೋಬರ್ 21, 2026: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ತನ್ನ ಧಾರವಾಡ ಘಟಕದಲ್ಲಿ ಭವಿಷ್ಯ ಸಿದ್ಧ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ಪೀಳಿಗೆಯ ಪೇಂಟ್ ಶಾಪ್ ಉದ್ಘಾಟನೆ ಹಾಗೂ ನೂತನ ಬಾಡಿ-ಇನ್-ವೈಟ್ (ಬಿಐಡಬ್ಲ್ಯೂ) ಮತ್ತು ಇ-ಆಕ್ಸೆಲ್ ಅಸೆಂಬ್ಲಿ ಲೈನ್ ಗಳನ್ನು ಆರಂಭಿಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಈ ಹೊಸ ಸೌಲಭ್ಯಗಳು ಕೇವಲ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದಷ್ಟೇ ಅಲ್ಲದೆ, ಘಟಕದ ಉತ್ಪಾದನಾ ಸೌಲಭ್ಯವನ್ನು ಹೆಚ್ಚಿಸಲಿದ್ದು, ಸಾಂಪ್ರದಾಯಿಕ ಹಾಗೂ ಶೂನ್ಯ-ಹೊರಸೂಸುವಿಕೆಯ ಪವರ್ ಟ್ರೇನ್ ಗಳ ವಾಹನಗಳನ್ನು ತಯಾರಿಸುವ ಸಂಸ್ಥೆಯ ಕ್ಷಮತೆಯನ್ನು ಮತ್ತಷ್ಟು ವೃದ್ಧಿಸಲಿವೆ.
ಈ ನೂತನ ಸೌಲಭ್ಯಗಳನ್ನು ಟಾಟಾ ಮೋಟಾರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಓ ಶ್ರೀ ಗಿರೀಶ್ ವಾಘ್ ಅವರು ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶ್ರೀ ವಿಶಾಲ್ ಬಾದ್‌ಶಾಹ್ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಡಿ.ಪಿ. ನಂಬಿಯಾರ್ ಅವರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಧಾರವಾಡ ಘಟಕದ ಯುವ ಮತ್ತು ನುರಿತ ಕಾರ್ಖಾನೆ ಕಾರ್ಯಪಡೆಯಲ್ಲಿ ಶೇಕಡ 30 ಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಇದೇ ವೇಳೆ ಉದ್ಯೋಗಿಗಳ ಮಕ್ಕಳ ಯೋಗಕ್ಷೇಮಕ್ಕಾಗಿ ಕಾರ್ಖಾನೆಯ ಆವರಣದಲ್ಲೇ ಸುಸಜ್ಜಿತ ಶಿಶುಪಾಲನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು. ಇದು ವಿವಿಧ ಹಿನ್ನೆಲೆಯ ಕಾರ್ಯಪಡೆಗೆ ಸಮಾನ ಅವಕಾಶ ಹಾಗೂ ಬೆಂಬಲ ನೀಡುವ ಎಲ್ಲರನ್ನೂ ಒಳಗೊಳ್ಳುವಂತಹ ಕೆಲಸದ ವಾತಾವರಣ ನಿರ್ಮಿಸುವ ಟಾಟಾ ಮೋಟಾರ್ಸ್‌ನ ಬದ್ಧತೆಗೆ ಸಾಕ್ಷಿಯಾಗಿದೆ.
ಧಾರವಾಡದ ಈ ಘಟಕವು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಗಾಗಿ ನೀಡಲಾಗುವ ISO 30415 (DEI) ಮಾನ್ಯತೆಯನ್ನು ಪಡೆದ ದೇಶದ ಮೊಟ್ಟಮೊದಲ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಪೂರ್ಣವಾಗಿ ಶೇಕಡ 100 ರಷ್ಟು ನವೀಕರಿಸಬಹುದಾದ ವಿದ್ಯುತ್‌ನಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕವು, ವಾಟರ್ ಪಾಸಿಟಿವ್ ಮತ್ತು ಜೀರೊ ವೇಸ್ಟ್ ಟು ಲ್ಯಾಂಡ್‌ಫಿಲ್ ಪ್ರಮಾಣೀಕರಣಗಳನ್ನು ಪಡೆದಿದ್ದು, ಸುಸ್ಥಿರ ಹಾಗೂ ಜಾಗತಿಕ ಗುಣಮಟ್ಟದ ಪರಿಸರಸ್ನೇಹಿ ಉತ್ಪಾದನೆಗೆ ಬದ್ಧವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‌ನ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ಶ್ರೀ ವಿಶಾಲ್ ಬಾದ್‌ಶಾಹ್ ಅವರು, “ಧಾರವಾಡ ಘಟಕವು ಇಂದು ನಮ್ಮ ಅತ್ಯಂತ ಬಹುಮುಖಿ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಬೆಳೆದಿದ್ದು, ಒಂದೇ ಆವರಣದಲ್ಲಿ ಸಾಂಪ್ರದಾಯಿಕ ಮತ್ತು ಶೂನ್ಯ-ಹೊರಸೂಸುವಿಕೆಯ ವಾಹನಗಳನ್ನು ಉತ್ಪಾದಿಸುತ್ತಿದೆ. ಇಂದು ಆರಂಭವಾದ ಹೊಸ ಸೌಲಭ್ಯಗಳು ಘಟಕವನ್ನು ಹೆಚ್ಚು ಸ್ವಚ್ಛ, ದಕ್ಷ ಮತ್ತು ಡಿಜಿಟಲ್ ತಂತ್ರಜ್ಞಾನ ಆಧಾರಿತವಾಗಿಸುವ ಜೊತೆಗೆ ಮಾರುಕಟ್ಟೆ ಹಾಗೂ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳಿಗೆ ತಕ್ಕಂತೆ ತ್ವರಿತವಾಗಿ ಸ್ಪಂದಿಸುವ ನಮ್ಯತೆಯನ್ನು ತಂದುಕೊಡಲಿವೆ. ಈ ಅಭಿವೃದ್ಧಿಗೆ ನಮ್ಮ ಯುವ, ನುರಿತ ಮತ್ತು ವೈವಿಧ್ಯಮಯ ಕಾರ್ಯಪಡೆಯೇ ಬೆನ್ನೆಲುಬು. ನಮಗೆ ನಿರಂತರ ಸಹಕಾರ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಸುಸ್ಥಿರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಉತ್ಪಾದನೆಯ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಗೆ ನಿರಂತರ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ” ಎಂದರು.
ಹೊಸ ತಾಂತ್ರಿಕ ಸೌಲಭ್ಯಗಳ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್‌ನ ಹಿರಿಯ ಜನರಲ್ ಮ್ಯಾನೇಜರ್ ಹಾಗೂ ಧಾರವಾಡ ಘಟಕದ ಮುಖ್ಯಸ್ಥ ಶ್ರೀ ವಿಜಯ್ ಬಟ್ಟು ಅವರು, “ಹೊಸ ಪೇಂಟ್ ಶಾಪ್, ಬಿಐಡಬ್ಲ್ಯೂ ಮತ್ತು ಇ-ಆಕ್ಸಲ್ ಲೈನ್ ಗಳ ಕಾರ್ಯಾರಂಭವು ಧಾರವಾಡ ಘಟಕದ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸಾಮರ್ಥ್ಯದಲ್ಲಿ ದೊಡ್ಡ ಮುನ್ನಡೆಯಾಗಿದೆ. ತನ್ನ ಮಾಡ್ಯುಲರ್ ವಿನ್ಯಾಸ ಮತ್ತು ವಿಸ್ತರಣಾ ಸಾಮರ್ಥ್ಯದ ಮೂಲಸೌಕರ್ಯದೊಂದಿಗೆ, ಈ ನೂತನ ಪೇಂಟ್ ಶಾಪ್ ಬದಲಾಗುತ್ತಿರುವ ಮಾರುಕಟ್ಟೆ ಹಾಗೂ ಗ್ರಾಹಕರ ಅಗತ್ಯಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು ನೆರವಾಗಲಿದೆ. ಜೊತೆಗೆ ಗುಣಮಟ್ಟ, ದಕ್ಷತೆ ಮತ್ತು ಪರಿಸರಸ್ನೇಹಿ ಸುಸ್ಥಿರತೆಯ ಮಾನದಂಡಗಳನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಶಕ್ತಿ ತುಂಬಲಿದೆ” ಎಂದು ತಿಳಿಸಿದರು.
ಕಳೆದ 2012 ರಲ್ಲಿ ತನ್ನ ಪ್ರಥಮ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದ ಧಾರವಾಡ ಘಟಕವು, ಕೇವಲ ಒಂದೇ ಉತ್ಪನ್ನ ತಯಾರಿಕಾ ಘಟಕದಿಂದ ಆರಂಭವಾಗಿ, ಇಂದು ಸುಮಾರು 650 ಎಕರೆಗಳ ಬೃಹತ್ ಸಮಗ್ರ ಕ್ಯಾಂಪಸ್‌ನಲ್ಲಿ ಬಹು-ಉತ್ಪನ್ನಗಳನ್ನು ನಿರ್ಮಿಸುವ ಹಬ್ ಆಗಿ ಮಾರ್ಪಟ್ಟಿದೆ. ಇಲ್ಲಿ ಸಣ್ಣ ವಾಣಿಜ್ಯ ವಾಹನಗಳು (ಎಸ್ ಸಿ ವಿ), ಮಧ್ಯಮ ಮತ್ತು ಲಘು ವಾಣಿಜ್ಯ ವಾಹನಗಳು (ಐ ಎಲ್ ಎಂ ಸಿ ವಿ), ಭಾರಿ ವಾಣಿಜ್ಯ ವಾಹನಗಳು (ಎಚ್ ಸಿ ವಿ) ಹಾಗೂ ವಿವಿಧ ಪವರ್‌ಟ್ರೇನ್ ಗಳ ಪ್ರಯಾಣಿಕ ವಾಣಿಜ್ಯ ವಾಹನಗಳನ್ನು ತಯಾರಿಸಲಾಗುತ್ತಿದೆ. ಇದರೊಂದಿಗೆ ಈ ಘಟಕವು ಉತ್ತರ ಕರ್ನಾಟಕದಾದ್ಯಂತ ಇರುವ ನೂರಾರು ಎಂಎಸ್‌ಎಂಇ ಮತ್ತು ಬಿಡಿಭಾಗ ಪೂರೈಕೆದಾರರ ಜಾಲಕ್ಕೂ ಪ್ರಮುಖ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ.







