ಮಣಿಪಾಲ, 16 ಅಕ್ಟೋಬರ್ 2026: ಪರಿವರ್ತನಶೀಲ ಜಗತ್ತಿನಲ್ಲಿ ಸೋಂಕುಕಾರಕ ರೋಗಗಳ ಸವಾಲಿನ ಕುರಿತ ಜಾಗತಿಕ ಮಟ್ಟದಲ್ಲಿ ಆಯೋಜಿಸಲಾದ ಭಾರತದ ದ್ವಿತೀಯ ‘ನೇಚರ್’ ಸಮಾವೇಶ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ನಲ್ಲಿ 2026 ಅಕ್ಟೋಬರ್ 14ರಿಂದ 16ರವರೆಗೆ ಆಯೋಜನೆಗೊಂಡಿದ್ದು ಇಂದು ಸಮಾಪ್ತಿಗೊಂಡಿತು. ಭಾರತ ಮತ್ತು ವಿಶ್ವದ ಪ್ರಮುಖ ಸಂಶೋಧಕರು ಹಾಗೂ ತಜ್ಞರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಸಾಂಕ್ರಾಮಿಕ ರೋಗಗಳ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎದುರಾಗುತ್ತಿರುವ ಹೊಸ ಸವಾಲುಗಳ ಕುರಿತು ಚರ್ಚಿಸಿದರು.
ಅತ್ಯಧಿಕ ನಿಯತಕಾಲಿಕೆಗಳನ್ನು ಮತ್ತು ಪ್ರಕಟಣೆಗಳನ್ನು ಹೊರತರುವ ಯುರೋಪಿನ ಸ್ಪ್ರಿಂಗರ್ ನೇಚರ್ ಪ್ರಕಾಶನ ಸಂಸ್ಥೆಯ ಭಾಗವಾಗಿರುವ ‘ನೇಚರ್’ ನಿಯತಕಾಲಿಕೆಗಳ ಸಹಯೋಗದೊಂದಿಗೆ ಮಾಹೆಯು ಈ ಮಾಹೆಯು ಸಮಾವೇಶವನ್ನು ಸಂಯೋಜಿಸುತ್ತಿದೆ. ನೇಚರ್ ಮೆಡಿಸಿನ್, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್, ನೇಚರ್ ಕಮ್ಯುನಿಕೇಷನ್ಸ್ ವೈದ್ಯಕೀಯ-ವಿಜ್ಞಾನ ನಿಯತಕಾಲಿಕೆಗಳ ಸಹಭಾಗಿತ್ವದಲ್ಲಿ ಅಕ್ಟೋಬರ್ 14ರಿಂದ 16ರವರೆಗೆ ಆಯೋಜಿಸಿದ್ದ ಈ ಮೂರು ದಿನಗಳ ಸಮಾವೇಶವು ವಿವಿಧ ಕ್ಷೇತ್ರಗಳ ವಿಜ್ಞಾನಿಗಳ ನಡುವೆ ವಿಚಾರ ವಿನಿಮಯಕ್ಕೆ ವೇದಿಕೆಯಾಯಿತು. ರೋಗಗಳ ನಿಗಾ ಮತ್ತು ಮುನ್ಸೂಚನೆ, ಸೂಕ್ಷ್ಮಜೀವಿ ನಿರೋಧಕತೆ (ಎಎಂಆರ್), ರೋಗನಿರ್ಣಯ, ರೋಗ ತಡೆಗಟ್ಟುವಿಕೆ, ಲಸಿಕೆ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ಮಹಾಮಾರಿಗಳಿಗೆ ಸಿದ್ಧತೆ ಕುರಿತು ಸಂವಾದಗಳು ನಡೆದವು.
ಭಾರತದ ಪ್ರಥಮ ನೇಚರ್ ಸಮ್ಮೇಳನವು ಮಾಹೆಯಲ್ಲಿ 2024 ರಲ್ಲಿ ಜೈವಿಕ ವೈದ್ಯಕೀಯ ಅನ್ವಯಗಳಿಗೆ ಸಂಬಂಧಿಸಿದ ನ್ಯಾನೊವಸ್ತುಗಳ ಕುರಿತು ನಡೆದಿತ್ತು. ಈ ಸಮಾವೇಶವು ಅದರ ಮುಂದುವರಿಕೆಯಾಗಿದ್ದು ಸಂಕೀರ್ಣ ಆರೋಗ್ಯ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಸಂಸ್ಥೆಗಳು ಹಾಗೂ ಜಾಗತಿಕ ಸಂಶೋಧನಾ ಸಮುದಾಯದ ಪರಸ್ಪರ ಸಹಯೋಗಕ್ಕೆ ಮಹತ್ವ ಕೊಡಲಾಯಿತು.
ಈ ಸಮಾವೇಶದ ಯಶಸ್ಸಿನ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ‘ಭಾರತದ ಎರಡನೇ ನೇಚರ್ ಸಮ್ಮೇಳನವನ್ನು ಮಾಹೆಯಲ್ಲಿ ಆಯೋಜಿಸಿರುವ ಅವಕಾಶ ಲಭಿಸಿರುವುದು ವಿವಿಧ ಕ್ಷೇತ್ರಗಳು ಮತ್ತು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು ಹಾಗೂ ತಜ್ಞರನ್ನು ಒಂದೆಡೆ ಸೇರಿಸುವ ವೇದಿಕೆಯನ್ನು ಸಿದ್ಧಪಡಿಸಿದ ಹಾಗಾಗಿದೆ. ಸಾಂಕ್ರಾಮಿಕ ರೋಗಗಳು ಸಂಕೀರ್ಣ ಸವಾಲುಗಳನ್ನು ಮುಂದಿಡುತ್ತವೆ. ಅವುಗಳನ್ನು ಎದುರಿಸಲು ವೈಜ್ಞಾನಿಕ ಸಹಯೋಗ, ನಿರಂತರ ಸಂಶೋಧನೆ ಮತ್ತು ಜ್ಞಾನ ವಿನಿಮಯ ಅಗತ್ಯ. ಅರ್ಥಪೂರ್ಣ ವೈಜ್ಞಾನಿಕ ಸಂವಾದಕ್ಕೆ ವೇದಿಕೆ ಕಲ್ಪಿಸಲು ಹಾಗೂ ಸಾರ್ವಜನಿಕ ಸ್ವಾಸ್ಥ್ಯದ ಪ್ರಗತಿಗೆ ನೆರವಾಗುವ ಚರ್ಚೆಗಳನ್ನು ಬೆಂಬಲಿಸಲು ನೇಚರ್ ಪೋರ್ಟ್ಫೋಲಿಯೊದೊಂದಿಗೆ ಸಹಭಾಗಿತ್ವ ವಹಿಸಿರುವುದು ನಮಗೆ ಅಭಿಮಾನದ ಸಂಗತಿಯಾಗಿದೆ”
ನೇಚರ್ ಪೋರ್ಟ್ಫೋಲಿಯೊದ ಪ್ರತಿನಿಧಿಯಾಗಿ ಭಾಗವಹಿಸಿದ ನೇಚರ್ ಹೆಲ್ತ್ನ ಹಿರಿಯ ಸಂಪಾದಕರಾದ ಲಾರೆನ್ಸೊ ರಿಟೊ ಅವರು ಮಾತನಾಡಿ, ‘ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ವಿಶೇಷವಾದ ಜ್ಞಾನ ಅಗತ್ಯ. ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ರೋಗಕಾರಕಗಳು, ಸೂಕ್ಷ್ಮಜೀವಿ ನಿರೋಧಕತೆ, ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ ವ್ಯಾಪಕ ಪರಿಸರ ಅಂಶಗಳ ಕುರಿತು ಆಳವಾದ ತಿಳಿವಳಿಕೆ ಅಗತ್ಯ. ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಂಶೋಧಕರನ್ನು ನೇಚರ್ ಸಮ್ಮೇಳನವು ಒಂದೆಡೆ ಸೇರಿಸಿ, ವೈಜ್ಞಾನಿಕ ವಿಚಾರ ವಿನಿಮಯ ಮತ್ತು ಅಂತರ್ಶಿಸ್ತೀಯ ಸಹಯೋಗಕ್ಕೆ ಅವಕಾಶ ಕಲ್ಪಿಸುತ್ತದೆ. ಮಾಹೆಯೊಂದಿಗೆ ನೇಚರ್ ಪೋರ್ಟ್ಫೋಲಿಯೊದ ಸಹಭಾಗಿತ್ವವನ್ನು ಮುಂದುವರಿಸಲು ಮತ್ತು ಜಾಗತಿಕ ಆರೋಗ್ಯದ ಕೆಲವು ಅತ್ಯಂತ ಗಂಭೀರ ಸವಾಲುಗಳ ಕುರಿತು ಸಂಶೋಧನಾ ಸಮುದಾಯ ಚರ್ಚಿಸಲು ಅನುವು ಮಾಡಿಕೊಡುವ ವೇದಿಕೆಯನ್ನು ಬೆಂಬಲಿಸಲು ಅಭಿಮಾನವೆನಿಸುತ್ತದೆ.” ಎಂದರು.
ಸಮಾವೇಶದಲ್ಲಿ ಪ್ರಮುಖ ಭಾಷಣಗಳು, ಸಂಶೋಧನೆ ಮತ್ತು ಪೋಸ್ಟರ್ ಪ್ರಸ್ತುತಿಗಳು ನಡೆದವು. ಸಾಂಕ್ರಾಮಿಕ ರೋಗಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ, ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಸಂಶೋಧನೆ ಮತ್ತು ಪರಿಸರ ವಿಜ್ಞಾನ ಕ್ಷೇತ್ರಗಳ ಚಿಂತನೆಗಳ ಸಂಯುಕ್ತವೇದಿಕೆಯಾಗಿ ಸಮಾವೇಶ ಮಹತ್ವ ಪಡೆಯಿತು. ರೋಗಗಳ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ರೋಗ ಪತ್ತೆಯನ್ನು ಸುಧಾರಿಸುವುದು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ವಿಧಾನಗಳನ್ನು ಮುಂದುವರಿಸುವುದು ಹಾಗೂ ಪರಿಸರ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗಗಳ ಅಪಾಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಲಾರೆನ್ ಗಾರ್ಡ್ನರ್ ಅವರು ಕೋವಿಡ್ ನಂತರದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ದತ್ತಾಂಶದ ಪಾತ್ರದ ಕುರಿತು ಮಾತನಾಡಿದರೆ, ಮೆಕ್ಗಿಲ್ ವಿಶ್ವವಿದ್ಯಾಲಯದ ಮಧುಕರ್ ಪೈ ಅವರು ಕ್ಷಯರೋಗದ ರೋಗನಿರ್ಣಯದಲ್ಲಿ ಬದಲಾವಣೆ ತರುವ ಕುರಿತು ವಿಚಾರಮಂಡಿಸಿದರು. ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾಲಯದ ಶಬೀರ್ ಎ. ಮಧಿ ಅವರು ಮಕ್ಕಳಲ್ಲಿ ಲಸಿಕೆಯ ಮೂಲಕ ತಡೆಗಟ್ಟಬಹುದಾದ ಉಸಿರಾಟದ ಸೋಂಕುಗಳ ಪ್ರಗತಿ ಮತ್ತು ಸವಾಲುಗಳನ್ನು ಅವಲೋಕಿಸಿದರು. ಎರಾಸ್ಮಸ್ ವಿಶ್ವವಿದ್ಯಾಲಯ ರಾಟರ್ಡ್ಯಾಮ್ನ ಮರಿಯನ್ ಕೂಪ್ಮನ್ಸ್ ಅವರು ರೋಗ ಹರಡುವಿಕೆಯ ಅಪಾಯದ ಕುರಿತು ಮುನ್ಸೂಚನೆ ನೀಡುವ ಕುರಿತು ಚರ್ಚಿಸಿದರು.
ಇತರ ಅಧಿವೇಶನಗಳಲ್ಲಿ ಸೂಕ್ಷ್ಮಜೀವಿ ನಿರೋಧಕತೆ ಮತ್ತು ಹೊಸ ಚಿಕಿತ್ಸೆಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಕ್ಲೆಬ್ಸಿಯೆಲ್ಲಾ ನ್ಯುಮೋನಿಯೆ ಮತ್ತು ಕ್ಷಯರೋಗದ ಚಿಕಿತ್ಸಾ ಕ್ರಮಗಳ ಕುರಿತ ಸಂಶೋಧನೆಗಳೂ ಇದರಲ್ಲಿ ಸೇರಿದ್ದವು. ರೋಗನಿರ್ಣಯ ಮತ್ತು ತಡೆಗಟ್ಟುವಿಕೆ ಕುರಿತ ಚರ್ಚೆಗಳಲ್ಲಿ ಎಚ್ವಿವಿ ಪರೀಕ್ಷೆ ಮತ್ತು ಲಸಿಕೆ, ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಹಾಗೂ ಸ್ಥಳೀಯವಾಗಿ ನಿರಂತರವಾಗಿರುವ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳ ಅಭಿವೃದ್ಧಿ ಮತ್ತು ದೀರ್ಘಕಾಲ ರಕ್ಷಣೆ ನೀಡುವ ತಡೆಗಟ್ಟುವ ಕ್ರಮಗಳ ಲಭ್ಯತೆಯನ್ನು ಹೆಚ್ಚಿಸುವ ವಿಧಾನಗಳು ಒಳಗೊಂಡಿದ್ದವು.
ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗಗಳ ನಡುವಿನ ಸಂಬಂಧದ ಕುರಿತು ಸಮಾವೇಶದಲ್ಲಿ ಚರ್ಚಿಸಲಾಯಿತು. ರೋಗವಾಹಕಗಳ ಮೂಲಕ ಹರಡುವ ರೋಗಗಳ ಬದಲಾಗುತ್ತಿರುವ ಅಪಾಯ, ಮಕ್ಕಳ ಅಪೌಷ್ಟಿಕತೆ ಮತ್ತು ‘ಒನ್ ಹೆಲ್ತ್’ ದೃಷ್ಟಿಕೋನದಿಂದ ಸೂಕ್ಷ್ಮಜೀವಿ ನಿರೋಧಕತೆ ಕುರಿತು ಚರ್ಚಿಸಲಾಯಿತು. ಜಾಗತಿಕ ಆರೋಗ್ಯ ಸವಾಲುಗಳನ್ನು ರೂಪಿಸುವ ಪರಸ್ಪರ ಸಂಬಂಧಿತ ಅಂಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅಂತರ್ಶಿಸ್ತೀಯ ಸಂಶೋಧನೆಯ ಪ್ರಸ್ತುತತೆಯನ್ನು ಈ ಚರ್ಚೆಗಳು ಎತ್ತಿ ತೋರಿಸಿದವು.







