ಮಣಿಪಾಲ, October 01, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್‌ಇ) ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027ರಲ್ಲಿ ಮತ್ತಷ್ಟು ಪ್ರಗತಿ ಕಂಡಿದೆ. 2026ರ 601–800 ಜಾಗತಿಕ ಶ್ರೇಯಾಂಕ ವಲಯದಿಂದ 2027ರಲ್ಲಿ 551–600ರ ಜಾಗತಿಕ ಶ್ರೇಯಾಂಕ ವಲಯಕ್ಕೆ ಮಾಹೆಯ ಸ್ಥಾನ ಏರಿಕೆಯಾಗಿರುವುದು ಗಮನಾರ್ಹವಾಗಿದೆ.
ಇತ್ತೀಚಿನ ಶ್ರೇಯಾಂಕದಲ್ಲಿ ಭಾರತೀಯ ಸಂಸ್ಥೆಗಳ ಪೈಕಿ ಮಾಹೆ ತನ್ನ ರಾಷ್ಟ್ರಮಟ್ಟದ ಸ್ಥಾನವನ್ನು ಕೂಡ ಸುಧಾರಿಸಿಕೊಂಡಿದ್ದು, 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಗಮನಾರ್ಹವಾಗಿ, ಶ್ರೇಯಾಂಕದಲ್ಲಿ ಭಾಗವಹಿಸಿದ ಭಾರತೀಯ ಸಂಸ್ಥೆಗಳ ಒಟ್ಟು ಸಂಖ್ಯೆಯು 2026ರಲ್ಲಿ 128 ಇದ್ದು 2027ರಲ್ಲಿ 143ಕ್ಕೆ ಏರಿಕೆಯಾಗಿದ್ದರೂ ಮಾಹೆಯು ತನ್ನ ಗುಣಮಟ್ಟದಿಂದಾಗಿ ಪ್ರಗತಿಯನ್ನು ದಾಖಲಿಸಿದೆ.
ಬೋಧನೆ, ಸಂಶೋಧನೆ, ಶೈಕ್ಷಣಿಕ ಗುಣಮಟ್ಟ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಕೈಗಾರಿಕಾ ಸಹಭಾಗಿತ್ವ ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಮಾಹೆಯು ಉನ್ನತಿಯನ್ನು ದಾಖಲಿಸಿದ್ದು, ವಿಶೇಷವಾಗಿ, ಸಂಶೋಧನೆಯ ಗುಣಮಟ್ಟದ ಅಂಕವು 2026ರಲ್ಲಿ 56.4 ಇದ್ದು, 2027ರಲ್ಲಿ 62.0ಕ್ಕೆ ಏರಿಕೆಯಾಗಿದೆ. ಇದು ಸಂಶೋಧನೆ, ಬೋಧನೆ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಮತ್ತು ವಿಶ್ವಮಟ್ಟದಲ್ಲಿ ಇನ್ನಷ್ಟು ವಿಸ್ತರಿಸುವ ಮಾಹೆಯ ನಿರಂತರ ಪ್ರಯತ್ನದ ಫಲಶ್ರುತಿಯಾಗಿದೆ.
ಮಾಹೆಯ ಉಪಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಟೈಮ್ಸ್ ಹೈಯರ್ ಎಜುಕೇಶನ್ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಶ್ರೇಯಾಂಕ- 2027ರಲ್ಲಿ ಮಾಹೆಯ ಸ್ಥಾನದಲ್ಲಿ ಪ್ರಗತಿ ಕಂಡಿರುವುದು ಹರ್ಷದಾಯಕ ಸಂಗತಿಯಾಗಿದೆ. ಬೋಧನೆ, ಸಂಶೋಧನೆಯ ಗುಣಮಟ್ಟ ಹಾಗೂ ಔದ್ಯಮಿಕ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾಹೆ ನಿರಂತರವಾಗಿ ನಿರಂತರವಾಗಿ ಯತ್ನಶೀಲವಾಗಿರುವುದು ಇದರಿಂದ ಸಾಬೀತಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಕೊಡುಗೆ ನೀಡುವ ಮಾಹೆಯ ಪರಂಪರೆ ಮುಂದುವರಿದಿದ್ದು, ಈ ಸ್ಥಾನಮಾನವು ಮಾಹೆಯ ಸಾಮಾಜಿಕ ಬದ್ಧತೆಯನ್ನು ದೃಢಪಡಿಸುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ, ಬಹುಶಿಸ್ತೀಯ ಸಂಶೋಧನೆ, ಜಾಗತಿಕ ಸಹಭಾಗಿತ್ವ ಮತ್ತು ಪರಿಣಾಮಕಾರಿ ಔದ್ಯಮಿಕ ಸಹಭಾಗಿತ್ವಗಳ ಮೂಲಕ ನಾವು ಈ ಪ್ರಗತಿಯನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.







