ಕಾರ್ಕಳ: ಉಡುಪಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ವ್ಯಕ್ತಿಯೋರ್ವ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್‌ನಲ್ಲಿರುವ ಕಾರ್ಕಳ ಹೋಟೆಲ್ ಒಂದರ ಕೊಠಡಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ದುರ್ಗಾ ಗ್ರಾಮದ ರತ್ನಾಕರ ಸುವರ್ಣ (50) ಅವರ ಸಹೋದರ ಶಿವಾನಂದ ಎಂದು ಗುರುತಿಸಲಾಗಿದೆ.
ಶಿವಾನಂದ ಅವರು ಸೆಪ್ಟೆಂಬರ್ 11ರಂದು ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು.
ಬಳಿಕ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಪರಿಚಯಸ್ಥರು ಅವರ ಬಗ್ಗೆ ವಿಚಾರಿಸುತ್ತಿದ್ದರು. ಈ ನಡುವೆ ಸೆಪ್ಟೆಂಬರ್ 14ರಂದು ರಾತ್ರಿ 8.06ರ ಸುಮಾರಿಗೆ ಮಂಜುನಾಥ್ ಎಂಬವರು ರತ್ನಾಕರ ಸುವರ್ಣ ಅವರಿಗೆ ಕರೆ ಮಾಡಿ, ಶಿವಾನಂದ ಅವರು ಕಾರ್ಕಳ ದ ಹೋಟೆಲ್ ಒಂದರ ರೂಂ ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ರತ್ನಾಕರ ಸುವರ್ಣ ಅವರು ಹೋಟೆಲ್‌ಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಿದಾಗ, ಸೆಪ್ಟೆಂಬರ್ 14ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಶಿವಾನಂದ ಅವರಿಗೆ ಊಟ ನೀಡಿದ್ದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಶಿವಾನಂದ ಅವರು ಯಾವುದೋ ಕಾಯಿಲೆಯಿಂದಾಗಿ ಅಥವಾ ಇನ್ನಾವುದೋ ಕಾರಣದಿಂದ ಹೋಟೆಲ್ ಕೊಠಡಿಯ ಬಾತ್‌ರೂಮ್‌ನಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







