ಕೋಟ: ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ 72 ವರ್ಷದ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು ₹3 ಲಕ್ಷ ಮೌಲ್ಯದ ಕರಿಮಣಿ ಸರವನ್ನು ಕಳ್ಳರು ಎಳೆದು ಕಳವು ಮಾಡಿರುವ ಘಟನೆ ಕೋಟದಲ್ಲಿ ನಡೆದಿದೆ.
ಮಣೂರು ಗ್ರಾಮದ ಬೇಬಿ ಶೆಡ್ತಿ (72) ಅವರು ಸೆ.14ರಂದು ಮಧ್ಯಾಹ್ನ ಸುಮಾರು 12.15ಕ್ಕೆ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಬಳಿಕ ಸುಮಾರು 12.30ಕ್ಕೆ ದೇವಸ್ಥಾನದ ಹೊರಗೆ ಬಂದು ನೋಡಿದಾಗ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಕರಿಮಣಿ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
12.15ರಿಂದ 12.30ರ ನಡುವಿನ ಅವಧಿಯಲ್ಲಿ ದೇವಸ್ಥಾನದ ಒಳಗಡೆ ಯಾರೋ ಕಳ್ಳರು ಸರವನ್ನು ಎಳೆದು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಕರಿಮಣಿ ಸರದ ಮೌಲ್ಯ ಸುಮಾರು ₹3,00,000 ಎಂದು ಅಂದಾಜಿಸಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2026, ಕಲಂ 304 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







