ಕುಂದಾಪುರ: ಮನೆಯ ಬೆಡ್‌ರೂಮ್‌ನ ಗೋಡ್ರೆಜ್‌ನಲ್ಲಿ ಇಟ್ಟಿದ್ದ ಸುಮಾರು 56 ಗ್ರಾಂ ತೂಕದ, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಘಟನೆ ಕರ್ಕುಂಜೆ ಗ್ರಾಮದಲ್ಲಿ ನಡೆದಿದೆ.
ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು (55) ಎಂಬವರು ತಮ್ಮ ಮನೆಯ ಗೋಡ್ರೆಜ್‌ನಲ್ಲಿ ಚಿನ್ನದ ಹರಳಿನ ಎರಡು ಉಂಗುರಗಳು, ಚಿನ್ನದ ಬ್ರಾಸ್‌ಲೆಟ್ ಹಾಗೂ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರ ಸೇರಿದಂತೆ ಒಟ್ಟು 56 ಗ್ರಾಂ ತೂಕದ ಚಿನ್ನಾಭರಣಗಳನ್ನು ಪರ್ಸ್‌ನಲ್ಲಿ ಇಟ್ಟಿದ್ದರು. ಗೋಡ್ರೆಜ್‌ಗೆ ಬೀಗ ಅಳವಡಿಸಿರಲಿಲ್ಲ.
ಆ.17ರಂದು ಬೆಳಗ್ಗೆ 10 ಗಂಟೆಗೆ ಪರ್ಸ್‌ನಲ್ಲಿ ಚಿನ್ನಾಭರಣಗಳು ಇರುವುದನ್ನು ಅವರು ನೋಡಿದ್ದರು. ಸೆ.6ರಂದು ರಾತ್ರಿ 7.30ಕ್ಕೆ ಚಿನ್ನಾಭರಣಗಳನ್ನು ತೆಗೆಯಲು ನೋಡಿದಾಗ ಪರ್ಸ್‌ನಲ್ಲಿದ್ದ ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಆ.17ರ ಬೆಳಗ್ಗೆ 10 ಗಂಟೆಯಿಂದ ಸೆ.6ರ ರಾತ್ರಿ 7.30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗೋಡ್ರೆಜ್‌ನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







