ಉಡುಪಿ: ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಕೃಷ್ಣ ಮಠಕ್ಕೆ ಆಗಮಿಸುವ ಯಾತ್ರಿಕರ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಲಾದ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹವನ್ನು ಲೋಕಾರ್ಪಣೆಗೊಳಿಸಲಾಯಿತು.
ಯಾತ್ರಿಕರ ಉಪಯೋಗಕ್ಕಾಗಿ ನಿರ್ಮಿಸಲಾದ ಈ ಸೌಲಭ್ಯಗಳ ಕಾಮಗಾರಿಗೆ ಅಂದಾಜು ₹60 ಲಕ್ಷ ವೆಚ್ಚ ಮಾಡಲಾಗಿದೆ. ಕರ್ನಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ ರಾಘವೇಂದ್ರ ಭಟ್ ಅವರು ದೀಪ ಬೆಳಗಿಸುವ ಮೂಲಕ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು, ಮ್ಯಾನೇಜರ್ ವಾಸುದೇವ ಆಚಾರ್ಯ, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರಿನ ಉಪ ಮಹಾಪ್ರಬಂಧಕ ಶ್ರೀ ವಾದಿರಾಜ್ ಭಟ್, ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಹಾಗೂ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ರಮೇಶ್ ವೈದ್ಯ, ಕರ್ನಾಟಕ ಬ್ಯಾಂಕ್ ಕಾರ್‌ಸ್ಟ್ರೀಟ್ (ರಥಬೀದಿ) ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ಶ್ರೀ ಪ್ರಶಾಂತ್ ಎಂ. ರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕೃಷ್ಣ ಮಠಕ್ಕೆ ಆಗಮಿಸುವ ಸಾವಿರಾರು ಯಾತ್ರಿಕರಿಗೆ ಈ ನೂತನ ಸೌಲಭ್ಯಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ.







