ಮಣಿಪಾಲ್, ಆಗಸ್ಟ್ 12, 2026: ಮಣಿಪಾಲದ ಟಿ. ಎo. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಆವಿಷ್ಕಾರಗಳ ಕ್ಷೇತ್ರದಲ್ಲಿ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯದ ಬಾಂಧವ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಗಸ್ಟ್ 13 ರಂದು ‘ಟ್ಯಾಪ್ಮಿ -ಮೈಕ್ರೋಸಾಫ್ಟ್ ಎಐ ಲ್ಯಾಬ್’ಗಳ ಉದ್ಘಾಟನೆಗೆ ಸಜ್ಜಾಗಿದೆ. ಮಾಹೆ ಮತ್ತು ಮೈಕ್ರೋಸಾಫ್ಟ್ ಒಪ್ಪಂದದಡಿ ನಿರ್ಮಾಣವಾಗಿರುವ ಈ ನೂತನ ಲ್ಯಾಬ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಮೈಕ್ರೋಸಾಫ್ಟ್ ಇಂಡಿಯಾ, ಹಿಟಾಚಿ ಸಿಸ್ಟಮ್ಸ್ ಇಂಡಿಯಾ ಹಾಗೂ ಮಾಹೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಈ ಸಹಭಾಗಿತ್ವದ ಭಾಗವಾಗಿ, ಮಾಹೆಯು ತನ್ನ ಐದು ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌ಗಳನ್ನು ಸ್ಥಾಪಿಸಲಿದೆ. ಮಣಿಪಾಲದ ಟಿ. ಎo. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಬೆಂಗಳೂರಿನ ಟಿ. ಎo. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ), ಮಣಿಪಾಲದ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ (ಎಂಎಸ್‌ಸಿಇ), ಬೆಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್, ಫೈನಾನ್ಸ್ ಅಂಡ್ ಎಕನಾಮಿಕ್ಸ್ (ಎಂಐಸಿಎಫ್‌ಇ), ಮತ್ತು ಬೆಂಗಳೂರಿನ ಮಣಿಪಾಲ್ ಲಾ ಸ್ಕೂಲ್ (ಎಂಎಲ್‌ಎಸ್) ಕ್ಯಾಂಪಸ್‌ಗಳಲ್ಲಿ ಈ ಅತ್ಯಾಧುನಿಕ ಲ್ಯಾಬ್‌ಗಳು ತಲೆಎತ್ತಲಿವೆ.
ನೂತನವಾಗಿ ಸ್ಥಾಪನೆಯಾಗುತ್ತಿರುವ ಈ ಐದು ಲ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು ಮೈಕ್ರೋಸಾಫ್ಟ್‌ನ ಅತ್ಯಾಧುನಿಕ ಎಐ ಮತ್ತು ಡಿಜಿಟಲ್ ಪರಿಕರಗಳನ್ನು ಬಳಸುವ ಪ್ರಾಯೋಗಿಕ ಅವಕಾಶ ಪಡೆಯಲಿದ್ದಾರೆ. ಮ್ಯಾನೇಜ್‌ಮೆಂಟ್, ವಾಣಿಜ್ಯ, ಅರ್ಥಶಾಸ್ತ್ರ, ಹಣಕಾಸು ಮತ್ತು ಕಾನೂನು ವಿಭಾಗಗಳಲ್ಲಿ ಸಂಶೋಧನೆ ಹಾಗೂ ತಂತ್ರಜ್ಞಾನ-ಆಧಾರಿತ ನಾವೀನ್ಯಕ್ಕೆ ಇದು ಪುಷ್ಠಿ ನೀಡಲಿದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಖುದ್ದಾಗಿ ಬಳಸಿ ಕಲಿಯಲು ಈ ಲ್ಯಾಬ್‌ಗಳು ನೆರವಾಗಲಿವೆ.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಮೈಕ್ರೋಸಾಫ್ಟ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ಸಿಇಒ ಪುನೀತ್ ಚಂಡೋಕ್, ಹಿಟಾಚಿ ಸಿಸ್ಟಮ್ಸ್ ಇಂಡಿಯಾ ಸಿಇಒ ರಾಜ್ ಕಮಲ್ ಸಿಂಘಾಲ್ ಹಾಗೂ ಮೈಕ್ರೋಸಾಫ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ್ ಕೃಷ್ಣನ್ ಅವರು ಪಾಲ್ಗೊಳ್ಳಲಿದ್ದಾರೆ.
ಮಣಿಪಾಲ ಟ್ಯಾಪ್ಮಿ ನಿರ್ದೇಶಕ ಡಾ. ದೇವಾಸಿಸ್ ಪ್ರಧಾನ್ ಪ್ರತಿಕ್ರಿಯಿಸಿ, ’ಶೈಕ್ಷಣಿಕ ಜ್ಞಾನ ಮತ್ತು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ನಡುವಿನ ಕೊಂಡಿಯನ್ನು ಈ ಒಪ್ಪಂದ ಮತ್ತಷ್ಟು ಗಟ್ಟಿಗೊಳಿಸಲಿದೆ. ಇಂದಿನ ಮ್ಯಾನೇಜ್‌ಮೆಂಟ್ ಶಿಕ್ಷಣವು ವಿದ್ಯಾರ್ಥಿಗಳಿಗೆ ಕೇವಲ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿಸುವುದಕ್ಕೆ ಸೀಮಿತವಾಗದೆ, ಅವುಗಳನ್ನು ಜವಾಬ್ದಾರಿಯುತವಾಗಿ ಹಾಗೂ ಚಾಕಚಕ್ಯತೆಯಿಂದ ಬಳಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂಬುದೇ ಟ್ಯಾಪ್ಮಿಯ ಮೂಲ ಉದ್ದೇಶವಾಗಿದೆ’ ಎಂದರು.
ಮಾಹೆಯ ಡಿಜಿಟಲ್ ಮತ್ತು ಐಟಿ ವಿಭಾಗದ ನಿರ್ದೇಶಕ ಡಾ. ಗಣೇಶ್ ಪ್ರಸಾದ್ ಪ್ರತಿಕ್ರಿಯಿಸಿ, ’ಬೋಧನೆ ಮತ್ತು ಸಂಶೋಧನೆಯಲ್ಲಿ ಹೊಚ್ಚಹೊಸ ತಂತ್ರಜ್ಞಾನಗಳನ್ನು ಅಳವಡಿಸಿ, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಕಲಿಕಾ ವ್ಯವಸ್ಥೆಯನ್ನು ರೂಪಿಸುವ ನಮ್ಮ ಒಲವಿಗೆ ಈ ಒಪ್ಪಂದ ಸಾಕ್ಷಿಯಾಗಿದೆ. ಈ ನೂತನ ಮೈಕ್ರೋಸಾಫ್ಟ್ ಲ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಸುಧಾರಿತ ಡಿಜಿಟಲ್ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ನೀಡುವುದರ ಜತೆಗೆ, ಜಾಗತಿಕ ಮಟ್ಟದ ಟೆಕ್ ದಿಗ್ಗಜರೊಂದಿಗೆ ಮಾಹೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ’ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವಲ್ಲಿ ಈ ಐದು ಮೈಕ್ರೋಸಾಫ್ಟ್ ಲ್ಯಾಬ್‌ಗಳು ಪ್ರಮುಖ ಮೈಲಿಗಲ್ಲಾಗಿವೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ತಮ್ಮ ಕೌಶಲಗಳನ್ನು ರೂಪಿಸಿಕೊಳ್ಳಲು ಇವು ಮುಕ್ತ ಅವಕಾಶಗಳನ್ನು ಸೃಷ್ಟಿಸಲಿವೆ.







