ಬ್ರಹ್ಮಾವರ, ಆಗಸ್ಟ್ 07: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸಿ.ಎಸ್.ಐ. ಲೊಂಬಾರ್ಡ್ ಮಿಷನ್ ಆಸ್ಪತ್ರೆ ಹಾಗೂ ರುಡ್ಸೆಟ್ ಆಸರೆ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವು ರುಡ್ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ. ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉದ್ಯಮಿಗಳು ಹಾಗೂ ಕೊಡುಗೈ ದಾನಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರುಡ್ಸೆಟ್ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತರಬೇತಿ ಪಡೆಯುತ್ತಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದರು. ಹಿಂದಿನ ಕಾಲದಲ್ಲಿ ಮಹಿಳೆಯರು ಕೆಲವು ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಸೀಮಿತರಾಗಿದ್ದರು. ಆದರೆ ಇಂದು ಮಹಿಳೆಯರು ಮುಂದೆ ಬಂದು ವಿವಿಧ ಕೌಶಲ್ಯಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವ್ಯವಹಾರದಲ್ಲಿ ಕೇವಲ ಲಾಭ ಗಳಿಸುವುದಷ್ಟೇ ಮುಖ್ಯವಲ್ಲ; ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವುದು ಕೂಡ ಅತ್ಯಂತ ಮುಖ್ಯ. ವ್ಯವಹಾರದಲ್ಲಿ ತಾಳ್ಮೆ, ಪ್ರಾಮಾಣಿಕತೆ ಹಾಗೂ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿದ್ದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಅವರು ತಿಳಿಸಿದರು.
ನಾವು ನಮ್ಮ ವಾಹನವನ್ನು ಅತ್ಯಂತ ಕಾಳಜಿಯಿಂದ ಪ್ರತಿ ತಿಂಗಳಿಗೊಮ್ಮೆ ಪರಿಶೀಲಿಸುತ್ತೇವೆ. ಆದರೆ ನಮ್ಮದೇ ದೇಹ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಆರೋಗ್ಯ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಸಮಾಜಮುಖಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕೆಲಸದ ಒತ್ತಡದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ಮರೆತುಬಿಡುತ್ತೇವೆ. ಆದ್ದರಿಂದ “ಆರೋಗ್ಯವೇ ಸಂಪತ್ತು” ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಿರುವ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ. ಹರೀಶ್ ಜಿ., ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್, ಉಡುಪಿ; ಶ್ರೀ. ಅಣ್ಣಯ್ಯ ದಾಸ್, ಅಧ್ಯಕ್ಷರು, ಜಯಂಟ್ಸ್ ಗ್ರೂಪ್, ಬ್ರಹ್ಮಾವರ; ಡಾ. ಕೆವಿನ್ ಪಾಂಡ್ಯನ್, ಸಿ.ಎಸ್.ಐ. ಲೊಂಬಾರ್ಡ್ ಮಿಷನ್ ಆಸ್ಪತ್ರೆ; ಶ್ರೀ. ರಾಮಚಂದ್ರ ಆಚಾರ್, ಅಧ್ಯಕ್ಷರು, ರುಡ್ಸೆಟ್ ಆಸರೆ; ಶ್ರೀ. ಮಿಲ್ಟನ್ ಅಲೋವೆರಾ, ಕಾರ್ಯದರ್ಶಿ, ಜಯಂಟ್ಸ್ ಗ್ರೂಪ್; ಶ್ರೀ. ಮಹೇಶ್ ಕುಮಾರ್ ಮಲ್ಪೆ, ಮಾಲಕರು, ವಿಘ್ನೇಶ್ವರ ಪ್ರಿಂಟರ್ಸ್, ಮಲ್ಪೆ; ಶ್ರೀ. ರಾಜೇಶ್ ದೇವಾಡಿಗ, ಮಾಲಕರು, ಅವಿರಾಗ್ ಸ್ಟುಡಿಯೋ, ಬ್ರಹ್ಮಾವರ, ಶ್ರೀ. ಕುಶ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದಿರುವ ಯಶಸ್ವಿ ಉದ್ಯಮಿಗಳಿಗೆ ರುಡ್ಸೆಟ್ ಬಜಾರ್ ನ ಮೂಲಕ ಮಾರುಕಟ್ಟೆ ಅವಕಾಶವನ್ನು ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ. ಸುಂದರ್ ಪೂಜಾರಿ, ನಿರ್ದೇಶಕರು, ಜಯಂಟ್ಸ್ ಯೂನಿಟ್, ಸ್ವಾಗತಿಸಿದರು. ಶ್ರೀ. ಮಧುಸೂಧನ್, ಅಡ್ವೈಸರ್, ಜಯಂಟ್ಸ್ ಗ್ರೂಪ್ ಪ್ರಸ್ತಾವಿಕ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಶ್ರೀ ಸಂತೋಷ್ ಶೆಟ್ಟಿ ವಂದಿಸಿದರು.






