ಉಡುಪಿ: ಜು. 28: “ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ – ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ” ಎಂಬ ಧ್ಯೇಯದೊಂದಿಗೆ ಜುಲೈ 31ರಿಂದ ಆಗಸ್ಟ್ 2ರವರೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ‘ಸ್ವದೇಶಿ ಖಾದ್ಯ ಮೇಳ’ ನಡೆಯಲಿದೆ.
ಈ ಕುರಿತು ಉಡುಪಿಯ ಮಥುರಾ ಕಂಫರ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಾಜ ಸೇವಕ, ಕಾಂಗ್ರೆಸ್ ಮುಖಂಡ, ವಿವಿಧ ದೈವ–ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿಯಾಗಿರುವ ಹಾಗೂ ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ಸ್ವದೇಶಿ ಆಹಾರ ಸಂಸ್ಕೃತಿ ಮತ್ತು ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಈ ಮೇಳದಲ್ಲಿ ಸ್ವದೇಶಿ ತಿಂಡಿ–ತಿನಿಸುಗಳು, ತುಳುನಾಡಿನ ವಿಶೇಷ ಖಾದ್ಯಗಳು, ವಿವಿಧ ಬಗೆಯ ದೋಸೆಗಳು, ಹಲಸಿನ ಹಣ್ಣಿನಿಂದ ತಯಾರಿಸಲಾದ ವೈವಿಧ್ಯಮಯ ತಿನಿಸುಗಳು, ಮಳೆಗಾಲದ ವಿಶೇಷ ಆಹಾರ ಪದಾರ್ಥಗಳು ಹಾಗೂ ಸ್ಥಳದಲ್ಲೇ ತಯಾರಿಸಿ ನೀಡುವ ಲೈವ್ ಫುಡ್‌ಗಳು ಆಹಾರಪ್ರಿಯರನ್ನು ಆಕರ್ಷಿಸಲಿವೆ.
ಇದರೊಂದಿಗೆ ಸಾವಯವ ಉತ್ಪನ್ನಗಳು, ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು ಹಾಗೂ ವಿವಿಧ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ಸ್ಥಳೀಯ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಈ ಮೇಳಕ್ಕೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.







