ಮಣಿಪಾಲ, 27 ಜುಲೈ 2026: ಇತ್ತೀಚೆಗೆ 60 ವರ್ಷದ ಓರ್ವ ವ್ಯಕ್ತಿ ರಕ್ತ ವಾಂತಿ ಮಾಡಿಕೊಂಡು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ದಾಖಲಾದರು. ಗ್ಯಾಸ್ಟ್ರೋಎಂಟರಾಲಜಿ ತಂಡವು ಕೆಲವೇ ಗಂಟೆಗಳಲ್ಲಿ ರಕ್ತಸ್ರಾವವನ್ನು ನಿಯಂತ್ರಣಕ್ಕೆ ತಂದಿತು. ಬಳಿಕ ಅದಕ್ಕೆ ಮೂಲ ಕಾರಣವಾಗಿದ್ದ ರಕ್ತನಾಳದ ಶಂಟ್ ಅನ್ನು ಇಂಟರ್ವೆನ್ಷನಲ್ ರೇಡಿಯಾಲಜಿ ತಂಡವು ರಕ್ತನಾಳಗಳ ಒಳಗಿನಿಂದಲೇ ಕಾರ್ಯನಿರ್ವಹಿಸಿ ಮುಚ್ಚಿತು. ಈ ಚಿಕಿತ್ಸೆಯ ಬಳಿಕ 48 ಗಂಟೆಗಳೊಳಗೆ ಅವರನ್ನು ಬಿಡುಗಡೆ ಮಾಡಲಾಯಿತು, ಮತ್ತು ಹೊರರೋಗಿ ವಿಭಾಗದ ಪರಿಶೀಲನೆಯಲ್ಲಿ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಯಾವ ಹಂತದಲ್ಲಿಯೂ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬರಲಿಲ್ಲ.
ರೋಗಿಗೆ ದೀರ್ಘಕಾಲದ ಯಕೃತ್ ಕಾಯಿಲೆ ಮತ್ತು ಪೋರ್ಟಲ್ ಹೈಪರ್ಟೆನ್ಷನ್‌ನಿಂದ ಉಂಟಾದ ಫಂಡಲ್ ವೆರಿಕ್ಸ್‌ನಿಂದಾಗಿ ಜಠರಗರುಳಿನ ರಕ್ತಸ್ರಾವ ಉಂಟಾಗಿತ್ತು. ಯಕೃತ್ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ರಕ್ತಸ್ರಾವವನ್ನು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಮರಣ ಪ್ರಮಾಣ ಹೆಚ್ಚಾಗಿರುತ್ತದೆ. ಹೊಸ ವೈದ್ಯಕೀಯ ತಂತ್ರಜ್ಞಾನ ನೆರವಿನಿಂದ ನಾವು ಜಠರಗರುಳಿನ ರಕ್ತಸ್ರಾವವನ್ನು ಎಂಡೋಸ್ಕೋಪಿ ಮೂಲಕ ನಿರ್ವಹಿಸಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸುತ್ತಿದ್ದೇವೆ.
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶಿರಣ್ ಶೆಟ್ಟಿ ಅವರು ನಡೆಸಿದ ತುರ್ತು ಮೇಲ್ಭಾಗದ ಜಠರಗರುಳಿನ ಎಂಡೋಸ್ಕೋಪಿಯಲ್ಲಿ, ಹೊಟ್ಟೆಯ ಮೇಲ್ಭಾಗದಲ್ಲಿ ದೊಡ್ಡ ಉಬ್ಬಿರುವ ರಕ್ತನಾಳಗಳು ಇರುವುದು ಕಂಡುಬಂತು; ಅವುಗಳಲ್ಲಿ ಒಂದು ಸಕ್ರಿಯವಾಗಿ ರಕ್ತಸ್ರಾವ ಆಗುತ್ತಿತ್ತು. ರೋಗಿಯನ್ನು ಸ್ಥಿರಗೊಳಿಸಿದ ನಂತರ, ನಡೆಯುತ್ತಿದ್ದ ರಕ್ತಸ್ರಾವವನ್ನು ನಿಲ್ಲಿಸಲು ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ (EUS) ಮಾರ್ಗದರ್ಶಿತ ಚಿಕಿತ್ಸೆಯ ಮೂಲಕ ಗ್ಯಾಸ್ಟ್ರಿಕ್ ವೆರಿಕ್ಸ್‌ಗೆ ಚಿಕಿತ್ಸೆ ನೀಡಲಾಯಿತು. ರಕ್ತಸ್ರಾವಕ್ಕೆ ಕಾರಣವಾದ ರಕ್ತನಾಳ ಮತ್ತು ಶಂಟ್ ಅನ್ನು ಪತ್ತೆಹಚ್ಚಲು ಎಂಡೋಅಲ್ಟ್ರಾಸೌಂಡ್‌ನ ಹೊಸ ತಂತ್ರಜ್ಞಾನವನ್ನೂ ಬಳಸಲಾಯಿತು.
“ಇಂದಿನ ಎಂಡೋಸ್ಕೋಪಿ ಕೇವಲ ರೋಗನಿರ್ಣಯಕ್ಕಾಗಿ ಮಾತ್ರವಲ್ಲ. ಸ್ಕೋಪ್‌ನ ತುದಿಯಲ್ಲಿರುವ ಅಲ್ಟ್ರಾಸೌಂಡ್, ರೋಗಿ ಗಂಭೀರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲೇ, ಒಡೆದುಹೋಗಿದ್ದ ನಿಖರವಾದ ರಕ್ತನಾಳವನ್ನು ಗುರುತಿಸಿ ನಿಖರವಾಗಿ ಚಿಕಿತ್ಸೆ ನೀಡಲು ನಮಗೆ ಅವಕಾಶ ಮಾಡಿಕೊಟ್ಟಿತು. ರಕ್ತಸ್ರಾವವನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರುವುದೇ, ಒಂದು ಬಿಕ್ಕಟ್ಟಿನಿಂದ ಇನ್ನೊಂದಕ್ಕೆ ಸಾಗುವ ಬದಲು, ಶಾಶ್ವತ ಪರಿಹಾರವನ್ನು ಯೋಜಿಸಲು ನಮಗೆ ಅವಕಾಶ ಒದಗಿಸುತ್ತದೆ,” ಎಂದು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶಿರನ್ ಶೆಟ್ಟಿ ಹೇಳಿದರು.
ಪೋರ್ಟಲ್ ರಕ್ತಪರಿಚಲನೆ ಮತ್ತು ಎಡ ಮೂತ್ರಪಿಂಡದ ರಕ್ತನಾಳದ ನಡುವೆ ಒಂದು ದೊಡ್ಡ ಅಸಹಜ ಮಾರ್ಗ ತೆರೆದುಕೊಂಡು, ಗ್ಯಾಸ್ಟ್ರೋರೀನಲ್ ಶಂಟ್ ರೂಪುಗೊಂಡಿತ್ತು. ಇದು ಗ್ಯಾಸ್ಟ್ರಿಕ್ ವೆರಿಸಸ್‌ಗೆ ನಿರಂತರವಾಗಿ ರಕ್ತ ಪೂರೈಸುತ್ತಿತ್ತು. ಕೇವಲ ರಕ್ತಸ್ರಾವವಾಗುತ್ತಿದ್ದ ರಕ್ತನಾಳವನ್ನು ಮುಚ್ಚಿದರೆ ಅದು ಶಾಶ್ವತ ಪರಿಹಾರ ಆಗುತ್ತಿರಲಿಲ್ಲ. ಆ ಶಂಟ್ ತೆರೆದಿರುವವರೆಗೂ ರಕ್ತಸ್ರಾವ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿತ್ತು. ಆದ್ದರಿಂದ ಈ ಪ್ರಕರಣವನ್ನು ಗ್ಯಾಸ್ಟ್ರೋಎಂಟರಾಲಜಿ ಮತ್ತು ಇಂಟರ್ವೆನ್ಷನಲ್ ರೇಡಿಯಾಲಜಿ ತಂಡಗಳ ಜಂಟಿ ಚರ್ಚೆಗೆ ಒಳಪಡಿಸಲಾಯಿತು. ಇಂಟರ್ವೆನ್ಷನಲ್ ರೇಡಿಯಾಲಜಿ ಎಂಬುದು ಶಸ್ತ್ರಚಿಕಿತ್ಸೆಯ ಗಾಯದ ಬದಲಿಗೆ ನೇರ ಇಮೇಜಿಂಗ್ ಬಳಸಿ ರಕ್ತನಾಳಗಳ ಒಳಗಿನಿಂದಲೇ ಕಾಯಿಲೆಗೆ ಚಿಕಿತ್ಸೆ ನೀಡುವ ವಿಶೇಷ ವಿಭಾಗವಾಗಿದೆ. ಪೋರ್ಟಲ್ ಹೈಪರ್ಟೆನ್ಷನ್‌ನ ತೊಡಕುಗಳನ್ನು ನಿರ್ವಹಿಸುವ ವಿಧಾನವನ್ನು ಇದು ವಿಶ್ವದಾದ್ಯಂತ ಕ್ರಮೇಣ ಬದಲಾಯಿಸಿದೆ. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಡಾ. ಹರ್ಷಿತ್ ಕೆ ನೇತೃತ್ವದ ಇಂಟರ್ವೆನ್ಷನಲ್ ರೇಡಿಯಾಲಜಿ ತಂಡವು ಪ್ಲಗ್-ಅಸಿಸ್ಟೆಡ್ ರೆಟ್ರೋಗ್ರೇಡ್ ಟ್ರಾನ್ಸ್‌ವೀನಸ್ ಒಬ್ಲಿಟರೇಷನ್ (PARTO) ಎಂಬ ಕಾರ್ಯವಿಧಾನ ನಡೆಸಿತು.

ಒಂದೇ ರಕ್ತನಾಳದ ಚುಚ್ಚುವಿಕೆಯ ಮೂಲಕ, ಡಾ. ಹರ್ಷಿತ್ ಕೆ ಮತ್ತು ಅವರ ತಂಡವು ಎಕ್ಸ್-ರೇ ಮೇಲೆ ಅದರ ಮಾರ್ಗವನ್ನು ಅನುಸರಿಸುತ್ತಾ ಕ್ಯಾಥೆಟರ್ ಅನ್ನು ಶಂಟ್‌ವರೆಗೂ ಸಾಗಿಸಿತು. ವಿಶೇಷವಾಗಿ ವಿನ್ಯಾಸಗೊಳಿಸಿದ ವ್ಯಾಸ್ಕುಲರ್ ಪ್ಲಗ್ ಅನ್ನು ಶಂಟ್‌ನ ಮುಖದಲ್ಲಿ ಇರಿಸಿ ನಿಯೋಜಿಸಲಾಯಿತು; ಇದು ಅದನ್ನು ಒಳಗಿನಿಂದಲೇ ಮುಚ್ಚಿ, ಹೊಟ್ಟೆಯ ವೆರಿಸಸ್‌ಗೆ ಮತ್ತೆ ಮತ್ತೆ ರಕ್ತ ತುಂಬುತ್ತಿದ್ದ ಪೂರೈಕೆಯನ್ನು ಸ್ಥಗಿತಗೊಳಿಸಿತು. ನಂತರ ತೆಗೆದ ಸಿಟಿ ಸ್ಕ್ಯಾನ್, ಪ್ಲಗ್ ಸರಿಯಾಗಿ ಇರಿಸಲ್ಪಟ್ಟಿರುವುದನ್ನು ಮತ್ತು ಶಂಟ್ ಸಂಪೂರ್ಣವಾಗಿ ಮುಚ್ಚಿರುವುದನ್ನು ದೃಢಪಡಿಸಿತು. ಕೆಲವು ವರ್ಷಗಳ ಹಿಂದೆ ದೊಡ್ಡ ಶಸ್ತ್ರಚಿಕಿತ್ಸೆ ಮತ್ತು ವಾರಗಟ್ಟಲೆ ಚೇತರಿಕೆಯನ್ನು ಎದುರಿಸಬೇಕಾಗಿದ್ದ ರೋಗಿಗೆ, ಈಗ ಸೂಜಿ ಚುಚ್ಚಿದಷ್ಟು ಸಣ್ಣ ಚುಚ್ಚುವಿಕೆಯ ಮೂಲಕ, ದೇಹದ ಮೇಲೆ ಒಂದೇ ಒಂದು ಗಾಯವಿಲ್ಲದೆ ಚಿಕಿತ್ಸೆ ನೀಡಲಾಯಿತು. ಅವರಿಗೆ ಮತ್ತೆ ಯಾವುದೇ ರಕ್ತಸ್ರಾವದ ಸಮಸ್ಯೆ ಕಾಣಿಸಲಿಲ್ಲ ಮತ್ತು 48 ಗಂಟೆಗಳೊಳಗೆ ಮನೆಗೆ ತೆರಳಿದರು. ಡಾ. ಶಿರನ್ ಶೆಟ್ಟಿ ನಡೆಸಿದ ಫಾಲೋ-ಅಪ್ ಎಂಡೋಸ್ಕೋಪಿಯಲ್ಲಿ, ವೆರಿಸಸ್ ಸಂಪೂರ್ಣವಾಗಿ ನಿವಾರಣೆಯಾಗಿರುವುದು ಮತ್ತು ಸಕ್ರಿಯ ರಕ್ತಸ್ರಾವ ಇಲ್ಲದಿರುವುದು ಕಂಡುಬಂತು ಮತ್ತು ಅವರು ಆರೋಗ್ಯವಾಗಿದ್ದಾರೆ.
” ಇಂಥ ಪ್ರಕರಣಗಳೇ ನಾವು ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೀಡುತ್ತಿರುವ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆಗೆ ನಿದರ್ಶನ.. ಅತ್ಯಾಧುನಿಕ ಎಂಡೋಸ್ಕೋಪಿ, ಇಂಟರ್ವೆನ್ಷನಲ್ ರೇಡಿಯಾಲಜಿ ಮತ್ತು ತೀವ್ರ ನಿಗಾ ಚಿಕಿತ್ಸೆ ಇವೆಲ್ಲವೂ ಇಲ್ಲಿ ಒಂದೇ ಸೂರಿನಡಿ ಲಭ್ಯವಿವೆ. ಅದಕ್ಕಿಂತ ಮುಖ್ಯವಾಗಿ, ರೋಗಿಗಾಗಿ ಒಂದೇ ಚಿಕಿತ್ಸಾ ಯೋಜನೆಗೆ ಬರಲು ಈ ತಂಡಗಳು ಒಟ್ಟಾಗಿ ಕುಳಿತು ಚರ್ಚಿಸುವ ಅಭ್ಯಾಸ ಹೊಂದಿವೆ. ಸೆಂಟರ್ ಆಫ್ ಎಕ್ಸಲೆನ್ಸ್ ಎಂದರೆ ನಿಜವಾಗಿ ಇದೇ. ಇದರಿಂದ ಈ ಪ್ರದೇಶದ ಯಾವುದೇ ಭಾಗದ ರೋಗಿಯು, ತಾನು ಮಹಾನಗರಕ್ಕೆ ಪ್ರಯಾಣಿಸಿ ಪಡೆಯಬೇಕಾಗಿದ್ದ ಅದೇ ಗುಣಮಟ್ಟದ ಚಿಕಿತ್ಸೆಯನ್ನು ಇಲ್ಲಿಯೇ ಪಡೆಯಬಹುದು,” ಎಂದು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹೇಳಿದರು.







