ಪಡುಬಿದ್ರಿ: ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಪಡುಬಿದ್ರಿ ಪೊಲೀಸರು ತಡೆದು ಮೂವರು ದನಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಮೇ 18ರಂದು ಬೆಳಗ್ಗೆ ನಡೆದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಟಿ. ನಾಯ್ಕ್ ಅವರು ಸಿಬ್ಬಂದಿಯೊಂದಿಗೆ ಪಡುಬಿದ್ರಿ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ವಾಹನದಲ್ಲಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು.
ಮಾಹಿತಿ ಮೇರೆಗೆ ಪೊಲೀಸರು ಪಂಚರೊಂದಿಗೆ ಇನ್ನಾ ಗ್ರಾಮದ ವಿವಿಧೆಡೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಕಜನಡ್ಕ ಪ್ರದೇಶದಲ್ಲಿ ಬೆಳಗ್ಗೆ ಸುಮಾರು 6:40ಕ್ಕೆ ಅನುಮಾನಾಸ್ಪದವಾಗಿ ಬರುತ್ತಿದ್ದ ಟಾಟಾ 407 ಟರ್ಬೋ ವಾಹನವನ್ನು ತಡೆದು ಪರಿಶೀಲಿಸಿದರು.
ವಾಹನದಲ್ಲಿ ಕಂದು ಬಣ್ಣದ ಎರಡು ಹೆಣ್ಣು ದನಗಳು ಹಾಗೂ ಒಂದು ಗಂಡು ದನವನ್ನು ಕುತ್ತಿಗೆಗೆ ಹಗ್ಗ ಕಟ್ಟಿ ಕ್ರೂರ ರೀತಿಯಲ್ಲಿ ವಾಹನದ ರಾಡಿಗೆ ಬಿಗಿದಿರುವುದು ಪತ್ತೆಯಾಯಿತು.
ವಾಹನದಲ್ಲಿದ್ದ ಇಸ್ಮಾಯಿಲ್ (42), ಅಬ್ಬಾಸ್ಗುಡ್ಡೆ ಅಲಂಗಾರ್ ರೋಡ್, ನಡ್ಸಾಲು ಗ್ರಾಮ, ಕಾಪು ತಾಲೂಕು ಹಾಗೂ ಕರ್ನಿರೆ ಮಹಮ್ಮದ್ (62), ಕರ್ನಿರೆ ಮಸೀದಿ ಬಳಿ, ಮೂಲ್ಕಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ, ದನಗಳನ್ನು ಕಳ್ಳತನ ಮಾಡಿ ಮಾಂಸ ಮಾರಾಟ ಉದ್ದೇಶದಿಂದ ಮಂಗಳೂರು ಕಡೆಗೆ ಕಸಾಯಿಖಾನೆಗೆ ಸಾಗಿಸುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಸುಮಾರು ₹25 ಸಾವಿರ ಮೌಲ್ಯದ ದನಗಳು ಹಾಗೂ ₹4 ಲಕ್ಷ ಮೌಲ್ಯದ ವಾಹನವನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







