ಮಣಿಪಾಲ್, ಮಾರ್ಚ್ 30, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಎಂಸಿಒಪಿಎಸ್) ಭಾರತೀಯ ಫಾರ್ಮಸಿ ಕೌನ್ಸಿಲ್ (ಪಿಸಿಐ) ಸಹಯೋಗದೊಂದಿಗೆ ಮಣಿಪಾಲದಲ್ಲಿ ಹಮ್ಮಿಕೊಂಡಿದ್ದ ‘ಫಾರ್ಮಾ ಅನ್ವೇಷಣ್ 2026, ಕರ್ನಾಟಕ’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಫಾರ್ಮಸಿ ಶಿಕ್ಷಣ ದಿನದ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ಆಚರಿಸಲಾಗುತ್ತಿರುವ ಅಭಿಯಾನದ ಭಾಗವಾಗಿ ನಡೆದ ಈ ಕಾರ್ಯಕ್ರಮವು ಫಾರ್ಮಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಫಾರ್ಮಾ ವಲಯದ ಪ್ರಮುಖ ಪಾಲುದಾರರ ನಡುವೆ ನಾವೀನ್ಯತೆ ಹಾಗೂ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು.
ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಿಸಿಐ ಅಧ್ಯಕ್ಷರಾದ ಡಾ. ಮೊಂಟುಕುಮಾರ್ ಎಂ. ಪಟೇಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಸಹ ಕುಲಪತಿ ಡಾ. ಶರತ್ ಕೆ. ರಾವ್ ಹಾಗೂ ಪಿಸಿಐ ಉಪಾಧ್ಯಕ್ಷ ಜಶುಭಾಯ್ ಹೀರಾಭಾಯ್ ಚೌಧರಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಪಿಸಿಐನ ಕೇಂದ್ರ ಮಂಡಳಿ ಸದಸ್ಯ ಡಾ. ಸಲೀಮುಲ್ಲಾ ಖಾನ್ ಹಾಗೂ ಇತರ ಗಣ್ಯರು ಮತ್ತು ಪ್ರತಿನಿಧಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಕುಲಪತಿ ಡಾ. ಎಂ.ಡಿ. ವೆಂಕಟೇಶ್, ‘ಫಾರ್ಮಸಿ ಶಿಕ್ಷಣವನ್ನು ಬಲಪಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ನಿಯಂತ್ರಕ ಮಂಡಳಿಗಳು ಒಗ್ಗೂಡಿ ತೋರುತ್ತಿರುವ ಬದ್ಧತೆಗೆ ಫಾರ್ಮಾ ಅನ್ವೇಷಣ್ ಕಾರ್ಯಕ್ರಮವು ಸಾಕ್ಷಿಯಾಯಿತು. ಬದಲಾಗುತ್ತಿರುವ ಆರೋಗ್ಯ ಅಗತ್ಯಗಳಿಗೆ ತಕ್ಕಂತೆ ಸಂಶೋಧನೆ ಮತ್ತು ನಾವೀನ್ಯತೆಗೆ ಮಾಹೆ ಸದಾ ಆದ್ಯತೆ ನೀಡುತ್ತದೆʼ ಎಂದರು.
ಮಾಹೆ ಸಹ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ‘ಪಠ್ಯದ ಕಲಿಕೆ ಮತ್ತು ವೃತ್ತಿಪರ ಅಭ್ಯಾಸದ ನಡುವಿನ ಅಂತರವನ್ನು ಇಂತಹ ವೇದಿಕೆಗಳು ನಿವಾರಿಸುತ್ತವೆ. ಈ ಕ್ಷೇತ್ರದ ವಿವಿಧ ಪಾಲುದಾರರ ನಡುವೆ ಅರ್ಥಪೂರ್ಣ ಸಂವಾದಕ್ಕೆ ಫಾರ್ಮಾ ಅನ್ವೇಷಣ್ ಅವಕಾಶ ಕಲ್ಪಿಸುತ್ತದೆ. ರೋಗಿಗಳ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಕ್ರಿಯವಾಗಿ ಕೊಡುಗೆ ನೀಡಬಲ್ಲ, ಭವಿಷ್ಯದ ಸವಾಲುಗಳಿಗೆ ಸನ್ನದ್ಧರಾದ ಫಾರ್ಮಸಿ ವೃತ್ತಿಪರರನ್ನು ರೂಪಿಸಲು ಇದು ಸಹಕಾರಿಯಾಗಿದೆʼ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಪಿಸಿಐ ಅಧ್ಯಕ್ಷ ಡಾ. ಮೊಂಟುಕುಮಾರ್ ಎಂ. ಪಟೇಲ್ ಮಾತನಾಡಿ, ‘ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಫಾರ್ಮಸಿ ಶಿಕ್ಷಣವನ್ನು ರೂಪಿಸುವುದು ಅತ್ಯಗತ್ಯ. ಆರೋಗ್ಯ ಕ್ಷೇತ್ರದ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ನಿರಂತರ ವೃತ್ತಿಪರ ಅಭಿವೃದ್ಧಿಯ ಅಗತ್ಯವಿದೆ’ ಎಂದು ಹೇಳಿದರು. ರೋಗಿಗಳ ಸುರಕ್ಷತೆ ಮತ್ತು ವೈಜ್ಞಾನಿಕ ಔಷಧ ಬಳಕೆಯಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಅತ್ಯಂತ ನಿರ್ಣಾಯಕವಾದುದು ಎಂದು ಕಾರ್ಯಕ್ರಮದಲ್ಲಿದ್ದ ಎಲ್ಲಾ ಗಣ್ಯರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಪಿಸಿಐನ ಹಿರಿಯ ನಾಯಕತ್ವ, ನಿಯಂತ್ರಕ ಸಂಸ್ಥೆಗಳ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಫಾರ್ಮಸಿ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಕರ್ನಾಟಕದಾದ್ಯಂತದ ಸಂಶೋಧಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಉದಯೋನ್ಮುಖ ಪ್ರವೃತ್ತಿಗಳು, ನಿಯಂತ್ರಣ ಚೌಕಟ್ಟುಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿ ವೃತ್ತಿಪರರ ಬದಲಾಗುತ್ತಿರುವ ಪಾತ್ರದ ಕುರಿತು ಚರ್ಚಿಸಲು ಇದು ಪ್ರಮುಖ ವೇದಿಕೆಯಾಯಿತು. ಕಾರ್ಯಕ್ರಮದ ಭಾಗವಾಗಿ ತಾಂತ್ರಿಕ ಸೆಷನ್‌ಗಳು, ಸಂವಾದಗಳು ನಡೆದವು. ಡಾ. ಸುನಿಲ್ ಅತ್ತಾವರ್ ಮತ್ತು ಡಾ. ವಿಜಯ್ ಕುಲಕರ್ಣಿ ಸೇರಿದಂತೆ ಉದ್ಯಮದ ಪ್ರಮುಖರು ಉಪನ್ಯಾಸ ನೀಡಿದರು. ‘ಫಾರ್ಮಾ ಪರಿಸರ ವ್ಯವಸ್ಥೆಯ ಭವಿಷ್ಯ’ ಕುರಿತ ಸಂವಾದ, ಪ್ರಾಂಶುಪಾಲರ ಸಭೆ ಮತ್ತು ಪಿಸಿಐ ಸದಸ್ಯರೊಂದಿಗಿನ ಮಂಥನ ಸಭೆಗಳು ಫಾರ್ಮಸಿ ಶಿಕ್ಷಣದ ಪ್ರಗತಿಗೆ ಪೂರಕವಾದ ಕಾರ್ಯತಂತ್ರದ ಒಳನೋಟಗಳನ್ನು ನೀಡಿದವು.
ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, 20ಕ್ಕೂ ಹೆಚ್ಚು ಪೇಟೆಂಟ್ಗಳನ್ನು ಪ್ರಸ್ತುತಿ ಪಡಿಸಲಾಯಿತು. 20ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾಗವಹಿಸಿದ್ದ ‘ಸ್ಟಾರ್ಟ್‌ಅಪ್ ಎಕ್ಸ್‌ಪೋ’ ವಿಶೇಷ ಗಮನ ಸೆಳೆದವು. ‘ಚಾಯ್ ಪೇ ಚರ್ಚಾ’ ಎಂಬ ವಿನೂತನ ಸಂವಾದಾತ್ಮಕ ಕಾರ್ಯಕ್ರಮವು ವಿವಿಧ ಪಾಲುದಾರರ ನಡುವೆ ಅರ್ಥಪೂರ್ಣ ವಿಚಾರ ವಿನಿಮಯಕ್ಕೆ ವೇದಿಕೆಯಾಯಿತು. ಸಿಪ್ಲಾ ಲಿಮಿಟೆಡ್, ಹಿಮಾಲಯ ವೆಲ್ನೆಸ್ ಕಂಪನಿ, ಶ್ರೋಡಿಂಗರ್, ಎಲಿ ಲಿಲ್ಲಿ (Eli Lilly), ನೊವಾರ್ಟಿಸ್ ಇಂಡಿಯಾ ಲಿಮಿಟೆಡ್ ಮತ್ತು ಜುಬಿಲಂಟ್ ಬಯೋಸಿಸ್ ನಂತಹ ಪ್ರಮುಖ ಔಷಧ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ನಿಯಂತ್ರಕ ಸಂಸ್ಥೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಿಸಿಐ ಅಧ್ಯಕ್ಷ ಡಾ. ಮಾಂಟುಕುಮಾರ್ ಎಂ. ಪಟೇಲ್, ಪಿಸಿಐ ಉಪಾಧ್ಯಕ್ಷರಾದ ಜಶುಭಾಯ್ ಹೀರಾಭಾಯ್ ಚೌಧರಿ, ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ಹಾಗೂ ರಾಜ್ಯ ಮತ್ತು ದಕ್ಷಿಣ ವಲಯದ ವಿವಿಧ ಪಿಸಿಐ ಸದಸ್ಯರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು., ಪಿಸಿಐ ಕೇಂದ್ರ ಮಂಡಳಿ ಸದಸ್ಯ ಡಾ. ಸಲೀಮುಲ್ಲಾ ಖಾನ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಸಾಧನೆಗಳ ಕುರಿತು ವಿವರಿಸಿದರು.
ಫಾರ್ಮಾ ಅನ್ವೇಷಣ್ 2026 ಕರ್ನಾಟಕ’ ಸಮಾವೇಶವು ಭಾರತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಫಾರ್ಮಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶೈಕ್ಷಣಿಕ ವಲಯ, ಉದ್ಯಮ ಮತ್ತು ನಿಯಂತ್ರಕ ಸಂಸ್ಥೆಗಳಿಗಿರುವ ಸಾಮೂಹಿಕ ಬದ್ಧತೆಯನ್ನು ಎತ್ತಿ ತೋರಿಸಿತು.
ಪ್ರಮುಖವಾಗಿ, 63 ವರ್ಷಗಳ ಇತಿಹಾಸವಿರುವ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಎನ್ಐಆರ್‌ಎಫ್ ರ‍್ಯಾಂಕಿಂಗ್‌ನಲ್ಲಿ ದೇಶದ ಮೊದಲ 10 ಫಾರ್ಮಸಿ ಕಾಲೇಜುಗಳಲ್ಲಿ ಸ್ಥಾನ ಪಡೆದಿದೆ. ಅಲ್ಲದೆ, ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಭಾಗದಲ್ಲಿ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ 2026ರಲ್ಲಿ ಮಾಹೆ ಜಾಗತಿಕವಾಗಿ 76ನೇ ಸ್ಥಾನವನ್ನು ಪಡೆದಿದೆ. ಇದು ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ ಮತ್ತು ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಂದಿರುವ ಅಂತರರಾಷ್ಟ್ರೀಯ ಮಟ್ಟದ ಘನತೆಯನ್ನು ಸಾಬೀತುಪಡಿಸುತ್ತದೆ.






