ಬೆಂಗಳೂರು: ಮಾರ್ಚ್ 26:45 ವರ್ಷದ ಶಾಲಿನಿಗೆ ತನಗೆ ಸ್ತನ ಕ್ಯಾನ್ಸರ್ ಇರುವುದು ತಿಳಿದಾಗ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗಿತ್ತು. ಚಿಕಿತ್ಸೆಯ ಪಯಣದಲ್ಲಿ ಅವರು ಕಿಮೋಥೆರಪಿ ಹಂತವೇ ಅತ್ಯಂತ ಕಠಿಣ ಎಂದು ಭಾವಿಸಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದುಹಾಕಿದ ನಂತರ ಮತ್ತು ಕಿಮೋಥೆರಪಿ ಮುಗಿದ ತಿಂಗಳುಗಳ ಬಳಿಕವೂ ಅವರ ಮನಸ್ಸನ್ನು ಒಂದು ಆತಂಕ ನಿರಂತರವಾಗಿ ಕಾಡುತ್ತಿತ್ತು: ಅದೇನೆಂದರೆ, “ಕ್ಯಾನ್ಸರ್ ಮತ್ತೆ ಮರುಕಳಿಸಬಹುದೇ?” ಎಂಬುದು.
ವೈದ್ಯರು ಆರಂಭಿಕ ಹಂತದಲ್ಲೇ ರೋಗ ಪತ್ತೆಯಾಗಿರುವ ಕುರಿತು ಧೈರ್ಯ ತುಂಬಿದರೂ ಮತ್ತು ಮುಂದಿನ ಚಿಕಿತ್ಸೆಗಳು ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ವಿವರಿಸಿದ್ದರೂ, ಆ ಅನಿಶ್ಚಿತತೆಯ ಭಾರ ಅವರನ್ನು ಬಹಳಷ್ಟು ಕುಗ್ಗಿಸಿತ್ತು. ಆದರೆ ಇಂತಹ ಕಷ್ಟಕರ ಸಮಯದಲ್ಲಿ ಅವರಿಗೆ ಚೈತನ್ಯ ನೀಡಿದ್ದು ಅವರ ಕುಟುಂಬದ ಕಾಳಜಿ.
ಶಾಲಿನಿ ಚೇತರಿಸಿಕೊಳ್ಳಲು ಕೇವಲ ಔಷಧಗಳಷ್ಟೇ ಕಾರಣವಾಗಲಿಲ್ಲ. ಮಗಳು ಪ್ರತಿದಿನ ಫೋನ್ ನಲ್ಲಿ ಔಷಧಿ ತೆಗೆದುಕೊಳ್ಳುವ ಸಮಯಕ್ಕೆ ‘ರಿಮೈಂಡರ್’ ಇಡುತ್ತಿದ್ದುದು, ಪತಿ ಪ್ರತೀ ಬಾರಿ ವೈದ್ಯರ ಭೇಟಿಗೆ ಜೊತೆಯಾಗುತ್ತಿದ್ದುದು ಮತ್ತು ಪ್ರತಿ ನೆಗೆಟಿವ್ ಸ್ಕ್ಯಾನ್ ವರದಿಯನ್ನು ಇಡೀ ಕುಟುಂಬ ಒಂದು ವಿಜಯೋತ್ಸವದಂತೆ ಆಚರಿಸುತ್ತಿದ್ದುದು ಅವರಿಗೆ ಹೊಸ ಜೀವನದ ಭರವಸೆ ನೀಡಿತು. ಈ ಬೆಂಬಲವೇ ಅವರು ಕಾಯಿಲೆಯ ವಿರುದ್ಧ ಹೋರಾಡುವುದನ್ನು ಬಿಟ್ಟು, ಮತ್ತೆ ಉತ್ಸಾಹದಿಂದ ಬದುಕಲು ಪ್ರೇರೇಪಿಸಿತು.
ಇಂದಿನ ವೈದ್ಯಕೀಯ ಜಗತ್ತಿನಲ್ಲಿ ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಯಶಸ್ವಿಯಾಗಿ ಗುಣಪಡಿಸಲು ಸಾಧ್ಯವಿದೆ. ಸಕಾಲಿಕ ರೋಗನಿರ್ಣಯ ಮತ್ತು ಸುಧಾರಿತ ವೈದ್ಯಕೀಯ ಪದ್ಧತಿಗಳಿಂದಾಗಿ ಚೇತರಿಕೆಯ ಪ್ರಮಾಣ ಹೆಚ್ಚುತ್ತಿದೆ. ಆದರೆ ನೆನಪಿರಲಿ, ಹೋರಾಟವು ಕೇವಲ ಶಸ್ತ್ರಚಿಕಿತ್ಸೆ ಅಥವಾ ಕಿಮೋಥೆರಪಿಯೊಂದಿಗೆ ಮುಗಿಯುವುದಿಲ್ಲ. ಯಾಕೆಂದರೆ ಕ್ಯಾನ್ಸರ್ ಮರುಕಳಿಸುವ ಆತಂಕವು ರೋಗಿಯ ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು. ಅಪಾಯವನ್ನು ತಗ್ಗಿಸಲು ಚಿಕಿತ್ಸೆಗಳು ತಿಂಗಳು ಅಥವಾ ವರ್ಷಗಳ ಕಾಲ ಮುಂದುವರಿಯಬಹುದು.
ಈ ಸುದೀರ್ಘ ಚಿಕಿತ್ಸಾ ಹಂತದಲ್ಲಿ ರೋಗಿಯ ಜೀವನದ ಗುಣಮಟ್ಟ, ದೈಹಿಕ ಶಕ್ತಿ ಮತ್ತು ಭಾವನಾತ್ಮಕ ಸ್ಥಿರತೆ ಬಹಳ ಮುಖ್ಯ. ದೈನಂದಿನ ದಿನಚರಿಯಲ್ಲಿ ಅವರು ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು ವೈದ್ಯಕೀಯ ಚಿಕಿತ್ಸೆಯಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿಯೇ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರ ಪಾತ್ರ ಅತ್ಯಂತ ನಿರ್ಣಾಯಕವಾಗುತ್ತದೆ. ಅವರು ನೀಡುವ ಬೆಂಬಲವು ರೋಗಿಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬಲಿಷ್ಠಗೊಳಿಸುತ್ತದೆ.
*ಈ ಕುರಿತು ಮಾತನಾಡುವ ಆಸ್ಟರ್ ಡಿಎಂ ಹೆಲ್ತ್ ಕೇರ್ ನ ವೈದ್ಯಕೀಯ ಸಲಹಾ ಮಂಡಳಿಯ ಅಧ್ಯಕ್ಷರು ಮತ್ತು ಬೆಂಗಳೂರಿನ ಆಸ್ಟರ್ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಗ್ಲೋಬಲ್ ಡೈರೆಕ್ಟರ್ ಪ್ರೊ. ಡಾ. ಸೋಮಶೇಖರ್ ಎಸ್.ಪಿ.* ಅವರು, “ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ ಎಂಬುದು ಒಂದು ತಪ್ಪು ಕಲ್ಪನೆ. ವಾಸ್ತವವೆಂದರೆ, ಈ ಹಂತದಲ್ಲಿ ಕ್ಯಾನ್ಸರ್ ಮರುಕಳಿಸುವ ಅಪಾಯವು ಶೇಕಡ 50 ರಷ್ಟಿರಬಹುದು ಅಷ್ಟೇ. ಆದ್ದರಿಂದ, ಕೇವಲ ಆರಂಭಿಕ ಗಡ್ಡೆಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಅದು ಮತ್ತೆ ಮರುಕಳಿಸದಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಿದೆ. ಸುಧಾರಿತ ‘ಟಾರ್ಗೆಟೆಡ್ ಥೆರಪಿ’ಗಳು ಅರ್ಹ ರೋಗಿಗಳಲ್ಲಿ ಈ ಅಪಾಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಮತ್ತು ಅವರ ಜೀವನದ ಗುಣಮಟ್ಟವನ್ನು ಉತ್ತಮವಾಗಿಡಲು ನಮಗೆ ಸಹಾಯ ಮಾಡುತ್ತವೆ. ಈ ಪಯಣದಲ್ಲಿ ಕುಟುಂಬದ ಬೆಂಬಲ ಅತ್ಯಗತ್ಯ. ಕುಟುಂಬದ ಪ್ರೋತ್ಸಾಹವು ರೋಗಿಗಳು ಚಿಕಿತ್ಸೆಯನ್ನು ಶ್ರದ್ಧೆಯಿಂದ ಮುಂದುವರಿಸಲು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ಹೇಳುತ್ತಾರೆ.
ಸ್ತನ ಕ್ಯಾನ್ಸರ್ ನ ಆರಂಭಿಕ ಹಂತದಲ್ಲಿರುವವರಿಗೆ ಬೆಂಬಲ ನೀಡುವುದು ಎಂದರೆ ಕೇವಲ ದೊಡ್ಡ ಕೆಲಸಗಳನ್ನು ಮಾಡುವುದಲ್ಲ; ಬದಲಿಗೆ ನಿರಂತರವಾಗಿ ಅವರ ಜೊತೆಗಿರುವುದು, ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸಹಾನುಭೂತಿಯಿಂದ ವರ್ತಿಸುವುದು. ನಿಮ್ಮ ಪ್ರೀತಿಪಾತ್ರರ ಈ ಕಠಿಣ ಪಯಣದಲ್ಲಿ ನೀವು ಬೆಂಬಲ ನೀಡಲು ಇಲ್ಲಿವೆ 4 ಮಾರ್ಗಗಳು:
*1. ಸುಧಾರಿತ ಚಿಕಿತ್ಸೆಗಳ ಬಗ್ಗೆ ಜೊತೆಯಾಗಿ ತಿಳಿಯಿರಿ*
ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರಿಗೆ, ಹಾರ್ಮೋನ್ ಆಧಾರಿತ ಔಷಧಗಳು ಮತ್ತು ‘ಟಾರ್ಗೆಟೆಡ್ ಥೆರಪಿ’ಯಂತಹ ಸುಧಾರಿತ ಚಿಕಿತ್ಸೆಗಳು ಅವರ ಜೀವನದ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದ ನಂತರವೂ ಹೆಚ್ಚುವರಿ ಚಿಕಿತ್ಸೆ ಏಕೆ ಅಗತ್ಯ ಎಂಬ ಬಗ್ಗೆ ಮಾಹಿತಿ ಪಡೆಯಲು ಸಮಯ ಮೀಸಲಿಡಿ. ವೈದ್ಯಕೀಯ ಸಮಾಲೋಚನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ. ವೈದ್ಯರ ಭೇಟಿಗೆ ಜೊತೆಯಾಗಿ ಹೋಗಿ, ಕೇಳಬೇಕಾದ ಪ್ರಶ್ನೆಗಳನ್ನು ಮೊದಲೇ ಬರೆದಿಟ್ಟುಕೊಳ್ಳಿ ಮತ್ತು ನಿಮ್ಮ ಆತಂಕಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ನೀವು ಜೊತೆಯಾಗಿ ವಿಷಯಗಳನ್ನು ತಿಳಿದುಕೊಂಡಾಗ, ಚಿಕಿತ್ಸೆಯ ನಿರ್ಧಾರಗಳು ಹೊರೆಯಾಗುವ ಬದಲು ಜವಾಬ್ದಾರಿಯಂತೆ ಭಾಸವಾಗುತ್ತವೆ ಮತ್ತು ಚಿಕಿತ್ಸೆಯನ್ನು ಶ್ರದ್ಧೆಯಿಂದ ಪಾಲಿಸುವ ಮನೋಭಾವ ಹೆಚ್ಚುತ್ತದೆ.
*2. ಕ್ಯಾನ್ಸರ್ ಮರುಕಳಿಸುವಿಕೆಯ ಆತಂಕದ ಬಗ್ಗೆ ಮುಕ್ತವಾಗಿ ಮಾತನಾಡಿ*
ಸ್ಕ್ಯಾನಿಂಗ್ ಗೆ ಮೊದಲು, ಸಣ್ಣ ದೈಹಿಕ ನೋವು ಕಾಣಿಸಿಕೊಂಡಾಗ ಅಥವಾ ಯಾವುದೋ ಸಂತೋಷದ ದಿನದಂದು ಇದ್ದಕ್ಕಿದ್ದಂತೆ ಕ್ಯಾನ್ಸರ್ ಮತ್ತೆ ಬರಬಹುದು ಎನ್ನುವ ಭಯ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಅವರ ಆತಂಕವನ್ನು ನಿರ್ಲಕ್ಷಿಸುವ ಬದಲು, ಅದನ್ನು ಒಪ್ಪಿಕೊಳ್ಳಿ. “ನಾನು ನಿನ್ನ ಜೊತೆಗಿದ್ದೇನೆ, ನಿನ್ನ ಮನಸ್ಸಿನಲ್ಲಿ ಏನಿದೆ ಎಂದು ಹೇಳು,” ಎಂಬಂತಹ ಸರಳ ಮಾತುಗಳು ಅವರ ಭಾವನಾತ್ಮಕ ಒಂಟಿತನವನ್ನು ದೂರ ಮಾಡಬಲ್ಲವು. ರೋಗಿಯ ದುರ್ಬಲ ಕ್ಷಣಗಳಲ್ಲಿ ಅವರಿಗೆ ಸುರಕ್ಷಿತ ಮತ್ತು ಬೆಂಬಲದಾಯಕ ವಾತಾವರಣವನ್ನು ನಿರ್ಮಿಸಿಕೊಡುವುದು ಪರಸ್ಪರ ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅವರಲ್ಲಿನ ಆತಂಕವನ್ನು ಕಡಿಮೆ ಮಾಡುತ್ತದೆ.
*3. ದೈನಂದಿನ ಜೀವನದ ಗುಣಮಟ್ಟವನ್ನು ಕಾಪಾಡಿ*
ಗುಣಮುಖರಾಗುವುದು ಎನ್ನುವುದು ಕೇವಲ ವೈದ್ಯಕೀಯ ಪ್ರಕ್ರಿಯೆಯಲ್ಲ, ಅದು ವೈಯಕ್ತಿಕವಾದದ್ದು ಕೂಡ. ಹಾಗಾಗಿ ಅವರು ಸಮತೋಲಿತ ಆಹಾರ ಕ್ರಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿ. ವೈದ್ಯರು ಅನುಮೋದಿಸಿದ ದೈಹಿಕ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಲು ನೆರವು ನೀಡಿ. ಅಗತ್ಯವಿದ್ದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವ ಸಮಯದ ಬಗ್ಗೆ ನೆನಪಿಸಿ. ಜೀವನದಲ್ಲಿ ಸಹಜವಾಗಿರುವಂತೆ ಮಾಡುವ ಮತ್ತು ಸಂತೋಷ ತರುವಂತಹ ಸಣ್ಣ ಸಣ್ಣ ಚಟುವಟಿಕೆಗಳನ್ನು ಪ್ಲಾನ್ ಮಾಡಿ. ಶಕ್ತಿ, ಸಕಾರಾತ್ಮಕತೆ ಮತ್ತು ದಿನಚರಿಯ ಮೇಲೆ ಗಮನಹರಿಸುವ ಮೂಲಕ, ಚಿಕಿತ್ಸೆಯು ಜೀವನಕ್ಕೆ ಪೂರಕವಾಗುವಂತೆ ನೀವು ನೋಡಿಕೊಳ್ಳಬಹುದು.
*4. ಸಣ್ಣ ಪ್ರಗತಿಯನ್ನೂ ಸಂಭ್ರಮಿಸಿ*
ಚಿಕಿತ್ಸಾ ಕ್ರಮದ ಒಂದು ಹಂತ ಪೂರ್ಣಗೊಂಡಾಗ, ಸ್ಕ್ಯಾನ್ ವರದಿ ಸ್ಥಿರವಾಗಿದ್ದಾಗ, ರಕ್ತದ ಪರೀಕ್ಷಾ ವರದಿಗಳು ಉತ್ತಮವಾಗಿದ್ದಾಗ ಅಥವಾ ಒಂದು ವಾರ ಪೂರ್ತಿ ಶಕ್ತಿಯುತವಾಗಿ ಕಳೆದಾಗ – ಇವುಗಳಲ್ಲಿ ಪ್ರತಿಯೊಂದನ್ನೂ ಗುರುತಿಸಿ ಸಂಭ್ರಮಿಸುವುದು ಮುಖ್ಯ. ಇಂತಹ ಪ್ರಮುಖ ಘಟ್ಟಗಳಲ್ಲಿ ಪ್ರೀತಿಯ ಹಬ್ಬದ ವಾತಾವರಣ ನಿರ್ಮಿಸಿ. ಅವರಿಗೆ ಇಷ್ಟವಾದ ಊಟವಾಗಿರಬಹುದು, ಕುಟುಂಬದ ಜೊತೆ ಫೋಟೋ ತೆಗೆಸಿಕೊಳ್ಳುವುದಾಗಿರಬಹುದು ಹೀಗೆ ಪ್ರತಿಯೊಂದನ್ನೂ ಸಂಭ್ರಮಿಸಿ. ಇಂತಹ ಸಂಭ್ರಮಾಚರಣೆಗಳು ಕ್ಯಾನ್ಸರ್ ಮರುಕಳಿಸುವಿಕೆಯ ಭಯವನ್ನು ಹೋಗಲಾಡಿಸಿ, ಹೋರಾಟದ ಹಾದಿಯಲ್ಲಿ ಧೈರ್ಯವನ್ನು ತುಂಬುತ್ತವೆ.
ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಎಂಬುದು ಒಂದು ಇದ್ದಕ್ಕಿದ್ದಂತೆ ಒಂದು ದಿನ ಧುತ್ತೆಂದು ಎದುರಾಗಬಹುದು. ಆದರೆ ಅದರ ಚಿಕಿತ್ಸಾ ಪಯಣವು ದೀರ್ಘಕಾಲಿಕವಾಗಿರುತ್ತದೆ, ಅಪಾಯ ಮರುಕಳಿಸುವಿಕೆಯ ಭಯ ಹೊಂದಿರುತ್ತದೆ ಮತ್ತು ಅದೆಲ್ಲವನ್ನೂ ನಿಭಾಯಿಸುವುದು ಒಂದು ಸಾಮೂಹಿಕ ಪ್ರಯತ್ನವಾಗಿರುತ್ತದೆ. ಸುಧಾರಿತ ಚಿಕಿತ್ಸೆಗಳು ಇಂದು ಕ್ಯಾನ್ಸರ್ ಮುಕ್ತ ಭವಿಷ್ಯ ಹೊಂದುವ ಭರವಸೆಯನ್ನು ನೀಡುತ್ತಿವೆ ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತಿವೆ. ಆದರೂ, ಕ್ಯಾನ್ಸರ್ ರೋಗಿಗಳಿಗೆ ನಿಜವಾದ ಶಕ್ತಿಯಾಗಿ ನಿಲ್ಲುವುದು ಮನೆಯಲ್ಲಿರುವ ಪ್ರೀತಿಪಾತ್ರರೇ. ಯಾರು ರೋಗಿಯ ಮಾತಿಗೆ ಕಿವಿಯಾಗುತ್ತಾರೋ, ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳುತ್ತಾರೋ ಮತ್ತು ಪ್ರತಿ ಹಂತದಲ್ಲೂ ಜೊತೆಯಾಗಿ ನಿಲ್ಲುತ್ತಾರೋ ಅವರೇ ನಿಜವಾದ ಆಸರೆಯಾಗುತ್ತಾರೆ. ಹಾಗಾಗಿ ಕ್ಯಾನ್ಸರ್ ರೋಗಿಗಳಿಗೆ ಕುಟುಂಬದ ಆಸರೆ ಬಹಳ ಮುಖ್ಯ.






