ಬೆಳ್ತಂಗಡಿ, ಮಾ. 19: ಮುಂಡಾಜೆ–ಇಂದಬೆಟ್ಟು ಗಡಿಭಾಗದ ಅರಸಮಜಲು ಸಮೀಪ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ನಡೆದಿದೆ.
ಮೃತರನ್ನು ಮುಂಡಾಜೆ ಗ್ರಾಮದ ಕುಳೂರು ನಿವಾಸಿ ನಿಶಾಂತ್ (16) ಎಂದು ಗುರುತಿಸಲಾಗಿದೆ. ಸ್ಥಳೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಸಂಬಂಧಿಕರೊಂದಿಗೆ ನದಿಗೆ ತೆರಳಿದ್ದರು. ನದಿಯ ಆಳವನ್ನು ಅಂದಾಜಿಸಲು ವಿಫಲವಾದ ಕಾರಣ ಆತನು ಆಳವಾದ ನೀರಿಗೆ ಸಿಲುಕಿದ್ದು, ಜೊತೆಯಲ್ಲಿದ್ದವರು ರಕ್ಷಿಸಲು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಸುಮಾರು 10 ಅಡಿ ಆಳದಲ್ಲಿದ್ದ ಮೃತದೇಹವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸುಧೀರ್, ಸ್ನೇಕ್ ಪ್ರಕಾಶ್, ಸ್ನೇಕ್ ಅನಿಲ್, ನಳಿನ್ ಬೇಕಲ್, ಸಚಿನ್ ಭಿಡೆ, ಧನೇಶ್ ಧನ್ವಿ ಹಾಗೂ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬ ಹಿನ್ನೆಲೆ ದುರಂತಮಯ
ನಿಶಾಂತ್ ಮೂಲತಃ ಕೇರಳ ಮೂಲದವರಾಗಿದ್ದು, ಹಲವು ವರ್ಷಗಳ ಹಿಂದೆ ಕುಟುಂಬ ಸಮೇತ ಮುಂಡಾಜೆಗೆ ವಲಸೆ ಬಂದು ನೆಲೆಸಿತ್ತು. ಅವರ ಪೋಷಕರು ಸ್ಥಳೀಯ ತೋಟಗಳಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ತಾಯಿ ಬೆಂಕಿ ಅವಘಡದಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ.
ಪ್ರಸ್ತುತ ನಿಶಾಂತ್ ತನ್ನ ಅಕ್ಕನೊಂದಿಗೆ ವಾಸವಾಗಿದ್ದು, ಅಕ್ಕ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇಬ್ಬರೂ ಸಮೀಪದ ಸಂಬಂಧಿಕರ ಮನೆಗೆ ತೆರಳಿ ಊಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.







