ಉಡುಪಿ, ಮಾ. 19: ಗ್ಯಾಸ್ ಬಿಲ್ ಪಾವತಿ ಹೆಸರಿನಲ್ಲಿ ಎಪಿಕೆ (APK) ಫೈಲ್ ಕಳುಹಿಸಿ ಹಣ ವಂಚಿಸುವ ಮತ್ತೊಂದು ಸೈಬರ್ ಅಪರಾಧ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದೆ.
ಉಡುಪಿಯ ರವಿದಾಸ್ ನಾಯಕ್ ಅವರಿಗೆ ಮಾರ್ಚ್ 17ರಂದು ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಕರೆ ಬಂದು, “ನಿಮ್ಮ ಗ್ಯಾಸ್ ಬಿಲ್‌ನಲ್ಲಿ ₹20 ಬಾಕಿ ಇದೆ, ತಕ್ಷಣ ಪಾವತಿಸಿ” ಎಂದು ತಿಳಿಸಲಾಗಿದೆ. ಕೆಲವೇ ಹೊತ್ತಿನಲ್ಲಿ ವಾಟ್ಸಪ್ ಮೂಲಕ ಬಾಕಿ ಬಗ್ಗೆ ಸಂದೇಶ ಹಾಗೂ ಎಪಿಕೆ ಫೈಲ್ ಕಳುಹಿಸಲಾಗಿದೆ.
ಆ ಫೈಲ್ ತೆರೆಯುವಂತೆ ಸೂಚಿಸಿದರೂ ಪಾವತಿ ನಡೆದಿಲ್ಲ ಎಂದು ಹೇಳಿದ ವಂಚಕ, ನಂತರ ಬೇರೆ ಮಾರ್ಗದಿಂದ ಹಣ ಪಾವತಿಸಲು ಒತ್ತಾಯಿಸಿದ್ದಾನೆ. ಈ ಸಂದರ್ಭದಲ್ಲಿ ಪೀಡಿತರಿಂದ ಮೂರು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು, ₹9,78,036 ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಗ್ಯಾಸ್ರ ಕೊರತೆ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ಗ್ಯಾಸ್ ಬುಕ್ಕಿಂಗ್ ಅಥವಾ ಕೆವೈಸಿ ನವೀಕರಣ ಹೆಸರಿನಲ್ಲಿ ಇಂತಹ ಸೈಬರ್ ವಂಚನೆಗಳು ಹೆಚ್ಚುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಅಪರಿಚಿತ ಲಿಂಕ್‌ಗಳು ಅಥವಾ ಫೈಲ್‌ಗಳನ್ನು ತೆರೆಯದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಗಮನಾರ್ಹವಾಗಿ, ಒಂದು ದಿನದ ಹಿಂದಷ್ಟೇ ಸಂತೆಕಟ್ಟೆ ಮೂಲದ ಮತ್ತೊಬ್ಬ ವ್ಯಕ್ತಿ ಇದೇ ರೀತಿಯ ವಂಚನೆಯಲ್ಲಿ ₹69,005 ಕಳೆದುಕೊಂಡಿದ್ದ ಪ್ರಕರಣವೂ ಬೆಳಕಿಗೆ ಬಂದಿದೆ.







