ವಿಟ್ಲ, ಮಾ. 07: ರಾಜ್ಯ ಸರ್ಕಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ನಲ್ಲಿ ಅನಿವಾಸಿ ಕನ್ನಡಿಗರ (NRK) ಕಲ್ಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಅನುದಾನ ಅಥವಾ ಯೋಜನೆ ಘೋಷಿಸದಿರುವುದಕ್ಕೆ ಪ್ರವಾಸಿ ಕೂಟ ವಿಟ್ಲ (ರಿ) ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವದ ವಿವಿಧ ದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಅನೇಕ ಕನ್ನಡಿಗರು ರಾಜ್ಯದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಆದರೂ ಅವರ ಕಲ್ಯಾಣ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಈ ಬಾರಿ ಬಜೆಟ್‌ನಲ್ಲಿ ಅಗತ್ಯ ಆದ್ಯತೆ ನೀಡದಿರುವುದು ನಿರಾಶೆ ಮೂಡಿಸಿದೆ ಎಂದು ಸಂಘಟನೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷ ಮೊಹಮ್ಮದ್ ಮಸೂದ್ ವಿಟ್ಲ ಅವರು, ಸ್ವತಃ ಎನ್‌ಆರ್‌ಐ ಫೋರಂ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಕುರಿತು ಯಾವುದೇ ಯೋಜನೆಗಳನ್ನು ಘೋಷಿಸದಿರುವುದು ವಿಷಾದಕರ ಸಂಗತಿ ಎಂದು ಹೇಳಿದ್ದಾರೆ.
ಅನಿವಾಸಿ ಕನ್ನಡಿಗರ ಹಿತಾಸಕ್ತಿಗಾಗಿ ಪ್ರವಾಸಿ ಕೂಟ ವಿಟ್ಲ (ರಿ) ಸಂಘಟನೆಯು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅನಿವಾಸಿ ಕನ್ನಡಿಗ ಇಲಾಖೆಗೆ ಪ್ರತ್ಯೇಕ ಅನುದಾನ, ತುರ್ತು ನೆರವು ನಿಧಿ ಹಾಗೂ ವಿವಿಧ ಕಲ್ಯಾಣ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸುವಂತೆ ಆಗ್ರಹಿಸಿತ್ತು. ಆದರೆ ಈ ಕುರಿತು ಯಾವುದೇ ಘೋಷಣೆ ಇಲ್ಲದಿರುವುದು ಅನಿವಾಸಿ ಕನ್ನಡಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ವಿಷಯಕ್ಕೆ ಸೂಕ್ತ ಗಮನ ಹರಿಸಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಸಮರ್ಪಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸಂಘಟನೆ ಒತ್ತಾಯಿಸಿದೆ.







