ಉಡುಪಿ, ಮಾ. 05: ನಗರದ ಡಿ-ಮಾರ್ಟ್ ಮಳಿಗೆಯಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಪ್ರಕರಣದ ಆರೋಪಿ ಲೂಯಿಸ್ ರಂಜಲ್ (71) ಎಂದು ಗುರುತಿಸಲಾಗಿದೆ.
2025ರ ಜುಲೈ 12ರಂದು ಬಾಲಕಿ ತಾಯಿಯೊಂದಿಗೆ ನಗರದ ಡಿ-ಮಾರ್ಟ್ ಮಳಿಗೆಗೆ ತೆರಳಿದ್ದ ಸಂದರ್ಭದಲ್ಲಿ, ಅಲ್ಲಿದ್ದ ಲೂಯಿಸ್ ರಂಜಲ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಬೆಚ್ಚಿಬಿದ್ದ ಬಾಲಕಿ ದೂರ ಸರಿದಾಗ ಆರೋಪಿ ಕ್ಷಮೆಯಾಚಿಸಿದ್ದಾನೆ. ಆದರೆ ಬಳಿಕ ಮತ್ತೆ ಬಾಲಕಿಯನ್ನು ಅಸಭ್ಯವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಅವರು, ಆರೋಪಿಯನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಹಾಗೂ 12ರಡಿ ದೋಷಿ ಎಂದು ತೀರ್ಪು ನೀಡಿದರು. ಅದರಂತೆ ಆರೋಪಿಗೆ 3 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 1 ಸಾವಿರ ರೂ. ಸರ್ಕಾರಕ್ಕೆ ಹಾಗೂ 2 ಸಾವಿರ ರೂ. ಸಂತ್ರಸ್ತೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದರು.





