ಉಡುಪಿ : ಗಾಂಧಿ ಜಯಂತಿ ಪ್ರಯುಕ್ತ, ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶವನ್ನು ಪಾಲಿಸಿಕೊಂಡು ಸೇವಾ ಸಂಸ್ಥೆಗಳಾದ ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಉಪಯೋಗವಾಗುವ ಹಾಸಿಗೆ ಹೊದಿಕೆ, ಸ್ಥಾನದ ಟವೆಲ್ ಮತ್ತು ಬಿಸ್ಕೆಟ್ ಗಳನ್ನು ವಿತರಿಸಿದರು.
ಜಿಲ್ಲಾ ಸರ್ಜನ್ ಡಾ. ಅಶೋಕ್, ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ. ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ಪ್ರೇರಣೆಯಾಗಿಟ್ಟು ಸಮಾಜದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದರು. ಸರಕಾರಿ ಆಸ್ಪತ್ರೆಯ ರೋಗಿಗಳ ಮೇಲಿನ ಕರುಣೆಯಿಂದ ತಮ್ಮ ಸಹಕಾರವನ್ನು ನೀಡಿದ ಸಂಘಟನೆಗಳಿಗೆ ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಕೃತಜ್ಞತೆ ಸಲ್ಲಿಸಿದರು.
ಎರಡು ಸೇವಾ ಸಂಘ ಸಂಸ್ಥೆಗಳು ಜೊತೆಯಾಗಿ ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯಲ್ಲಿರುವ 130 ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಸಿಗೆ ಹೊದಿಕೆ, ಸ್ನಾನದ ಟವೆಲ್ ಮತ್ತು ಬಿಸ್ಕೆಟ್ ಪೊಟ್ಟಣದ ಕಿಟ್ಟನ್ನು ವಿತರಿಸಿ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಲ್ಫ್ರೆಡ್ ಡಿಸೋಜಾ, ಐರಿನ್ ಪಿರೇರಾ, ಜೋನ್ ಗೋಮ್ಸ್, ಉಷಾ ಲವೀನಾ, ಜೆರಾಲ್ಡ್ ಪಿರೇರಾ, ಸ್ಯಾOಡ್ರಾ ಕ್ರಾಸ್ಟೊ ಮತ್ತಿತರರು ಉಪಸ್ಥಿತರಿದ್ದರು.
ಭೂ ನ್ಯಾಯಮಂಡಳಿ ಸದಸ್ಯ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲಯನ್ ರೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿ, ಗಾಂಧಿ ಜಯಂತಿಯ ಸಂದೇಶವನ್ನು ನೀಡಿದರು. ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲೂವಿಸ್ ಧನ್ಯವಾದ ಸಮರ್ಪಿಸಿದರು. ಕೇಂದ್ರೀಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.







