ಮಣಿಪಾಲ, ಫೆ.28: ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಸಂಶೋಧಕರು, ಶ್ವಾಸಕೋಶದ ಮೂಲಕ ಹರಡುವ ಶೀಲೀಂಧ್ರವು ಮೆದುಳಿನ ನಿರ್ದಿಷ್ಟ ಕೋಶಗಳನ್ನು ಹೇಗೆ ಗುರಿಯಾಗಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮಾಹೆಯ ಘಟಕವಾಗಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದ ಮಾಲಿಕ್ಯೂಲರ್ ನ್ಯೂರೋಸೈನ್ಸರ್ ಕೇಂದ್ರದಲ್ಲಿ ಕೈಗೊಳ್ಳಲಾಗಿರುವ ಈ ಮಹತ್ವದ ಸಂಶೋಧನೆಯು ಫಂಗಲ್ ಮೆನಿಂಜೈಟಿಸ್‌ನ್ನು ಅರ್ಥಮಾಡಿಕೊಳ್ಳಲು ಹಾಗೂ ಪರಿಣಾಮಕಾರಿ ಚಿಕಿತ್ಸೆ ಅಭಿವೃದ್ಧಿಪಡಿಸಲು ಹೊಸ ದಾರಿಗೆ ದಾರಿ ಮಾಡಿಕೊಡುತ್ತದೆ.
ಡಾ. ದಿನೇಶ್ ಉಪಾಧ್ಯ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನವು, Cryptococcus neoformans ಎಂಬ ಶಿಲೀಂಧ್ರದಿಂದ ಉಂಟಾಗುವ ಮಾರಕ ಮೆನಿಂಜೈಟಿಸ್ ರೋಗದ ಮಾಲಿಕ್ಯೂಲುಗಳ (ಆಣ್ವಿಕ) ಕಾರ್ಯವಿಧಾನವನ್ನು ಅನಾವರಣಗೊಳಿಸಿದೆ. ಶ್ರೋಡಿಂಗರ್ ಮೆಟೀರಿಯಲ್ಸ್ ಸೈನ್ಸ್ ತಂಡದ ಸಹಯೋಗದಲ್ಲಿ ನಡೆದ ಈ ಸಂಶೋಧನೆಯು Frontiers in Immunology ಎಂಬ ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ರೋಗದ ಮೂಲ ಕಾರಣ ಏನು?
Cryptococcus neoformans ಮೆದುಳಿಗೆ ಪ್ರವೇಶಿಸಿದಾಗ ‘ಗ್ಲುಕುರೊನಾಕ್ಸಿಲೋಮನ್ನನ್’ (GXM) ಎಂಬ ವಿಷಕಾರಿ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದು ಮೆದುಳಿಗೆ ಹಾನಿ ಉಂಟುಮಾಡುತ್ತದೆ ಎಂಬುದು ಈಗಾಗಲೇ ತಿಳಿದಿದ್ದರೂ, ಅದು ಯಾವ ಕೋಶಗಳನ್ನು ವಿಶೇಷವಾಗಿ ಗುರಿಯಾಗಿಸುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ.
ಈ ಪ್ರಶ್ನೆಗೆ ಉತ್ತರ ಹುಡುಕಲು ಸಂಶೋಧಕರು ಮಾನವ ಪ್ಲುರಿಪೊಟೆಂಟ್ ಕಾಂಡಕೋಶಗಳಿಂದ ಅಭಿವೃದ್ಧಿಪಡಿಸಿದ ‘ಬ್ರೇನ್ ಆರ್ಗನಾಯ್ಡ್’ ಮಾದರಿಗಳನ್ನು ಬಳಸಿದರು. ಈ ಮಾದರಿಗಳು ಮಾನವ ಮೆದುಳಿನ ವಾತಾವರಣವನ್ನು ಪ್ರಯೋಗಾಲಯದಲ್ಲಿ ನಿಖರವಾಗಿ ಪುನರ್‌ನಿರ್ಮಿಸಲು ನೆರವಾಯಿತು.
“ಮಾನವ ಕಾಂಡಕೋಶಗಳಿಂದ ನಿರ್ಮಿತ ಮಿದುಳಿನ ಆರ್ಗನಾಯ್ಡ್‌ಗಳು ಜೈವಿಕ ಕಾರ್ಯವಿಧಾನಗಳು ಮತ್ತು ಸೂಕ್ಷ್ಮಜೀವಿ ರೋಗಕಾರಕತೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾದರಿಗಳಾಗಿವೆ,” ಎಂದು ಡಾ. ದಿನೇಶ್ ಉಪಾಧ್ಯ ತಿಳಿಸಿದ್ದಾರೆ.
“ನಮ್ಮ ಅಧ್ಯಯನವು GXM ಇತರ ಕೋಶಗಳಿಗಿಂತ ನರಕೋಶಗಳನ್ನು ಹೆಚ್ಚು ಗುರಿಯಾಗಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ,” ಎಂದು ಅವರು ಹೇಳಿದ್ದಾರೆ.
ನರಕೋಶಗಳೇ ಏಕೆ ಹೆಚ್ಚು ಬಲಿಯಾಗುತ್ತವೆ?
ಈ ಸಂಶೋಧನೆಯ ಪ್ರಮುಖ ಅಂಶವೆಂದರೆ ಉನ್ನತ ಮಟ್ಟದ ಮಾಲಿಕ್ಯೂಲುಗಳ ಮಾದರೀಕರಣ. Schrödinger, Inc. ಸಂಸ್ಥೆಯ ಮೆಟೀರಿಯಲ್ಸ್ ಸೈನ್ಸ್ ಸ್ಯೂಟ್ ಬಳಸಿ, ವಿವಿಧ ಮೆದುಳಿನ ಕೋಶಗಳ ಲಿಪಿಡ್ ಸಂಯೋಜನೆ ಆಧಾರಿತ ಅಣುಮಟ್ಟದ ಮಾದರಿಗಳನ್ನು ನಿರ್ಮಿಸಲಾಯಿತು.
ಅಧ್ಯಯನದಿಂದ ನರಕೋಶಗಳ ಹೊರಪದರದಲ್ಲಿ ‘ಫಾಸ್ಫಾಟಿಡಿಲ್ಕೋಲಿನ್’ (PC) ಎಂಬ ಲಿಪಿಡ್ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಕಂಡುಬಂದಿದೆ. GXM ಈ ಲಿಪಿಡ್‌ನೊಂದಿಗೆ ಬಲವಾದ ಆಕರ್ಷಕ ಸಂವಹನ ತೋರಿಸುವುದರಿಂದ ಅದು ನೇರವಾಗಿ ನರಕೋಶಗಳತ್ತ ಸೆಳೆಯಲ್ಪಡುತ್ತದೆ.
GXM ನರಕೋಶಗಳಿಗೆ ಅಂಟಿಕೊಂಡ ನಂತರ, ನರಕೋಶಗಳ ನಡುವಿನ ಸಂವಹನಕ್ಕೆ ಅಗತ್ಯವಾದ ‘ಸಿನಾಪ್ಟೋಫಿಸಿನ್’ ಪ್ರೋಟೀನ್ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದರಿಂದ ನರಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ.
ಚಿಕಿತ್ಸೆಗೆ ಹೊಸ ದಾರಿ
“ನರಕೋಶಗಳಲ್ಲಿ ಹೆಚ್ಚಿರುವ PC ಮಟ್ಟವೇ C. neoformans ನರಕೋಶಗಳನ್ನು ಗುರಿಯಾಗಿಸುವ ಪ್ರಮುಖ ಕಾರಣವೆಂಬುದಕ್ಕೆ ನಮ್ಮ ಅಧ್ಯಯನವು ಪೂರಕ ಸಾಕ್ಷ್ಯ ಒದಗಿಸುತ್ತದೆ,” ಎಂದು ಬಯೋಕೆಮಿಸ್ಟ್ರಿ ವಿಭಾಗದ ಪ್ರೊ. ಡಾ. ವಿಶುಕುಮಾರ್ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ವಿಭಾಗದ ಪ್ರೊ. ಡಾ. ಕವಿತಾ ಸರವು ಅವರು, “ಲಿಪಿಡ್-ನಿರ್ದಿಷ್ಟ ಸಂವಹನವನ್ನು ಗುರುತಿಸಿರುವುದು ಫಂಗಲ್ ಮೆನಿಂಜೈಟಿಸ್‌ನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಹಾಗೂ ಮೆದುಳಿನ ಕಾರ್ಯಕ್ಷಮತೆಯನ್ನು ರಕ್ಷಿಸುವ ಗುರಿಪಡಿಸಿದ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ದಾರಿ ತೆರೆದಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಶೋಧನೆ ಮಾನವ ಮಿದುಳಿನ ಆರ್ಗನಾಯ್ಡ್‌ಗಳನ್ನು ಬಳಸಿಕೊಂಡು ಶಿಲೀಂಧ್ರ ಸೋಂಕಿನ ಆಣ್ವಿಕ ಕಾರ್ಯವಿಧಾನಗಳನ್ನು ಅಧ್ಯಯನ ಮಾಡುವಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.





