ಉಡುಪಿ, ಫೆ.28: ತಾಲೂಕಿನ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದಲ್ಲಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ 6.30 ಎಕರೆ ಜಮೀನಿನಲ್ಲಿ ಉಡುಪಿ ಕಂಬಳ ಆಯೋಜನೆಗೆ ಸಂಬಂಧಿಸಿದ ಶಂಕುಸ್ಥಾಪನೆ ಕಾರ್ಯಕ್ರಮ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಫೆಬ್ರವರಿ 28ರಂದು ಬೆಳಿಗ್ಗೆ 10 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಂದಾಗಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾರ್ಚ್ 4ರಂದು ಅಧಿಕೃತವಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಯಾವುದೇ ಕಾರ್ಯಕ್ರಮ ನಡೆಯದಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ.
ಕಂಬಳಕ್ಕಾಗಿ ಜಮೀನು ಮೀಸಲು ವಿಚಾರವಾಗಿ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆ, ಜಿಲ್ಲಾಡಳಿತ ಈಗಾಗಲೇ ಮಾರ್ಚ್ 4ರಂದು ಅಧಿಕೃತ ಶಂಕುಸ್ಥಾಪನೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿತ್ತು. ಆದಾಗ್ಯೂ ಅನಧಿಕೃತವಾಗಿ ಕಾರ್ಯಕ್ರಮ ಆಯೋಜನೆ ಪ್ರಯತ್ನಗಳು ನಡೆಯುತ್ತಿರುವ ಮಾಹಿತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಭಂಗವಾಗುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.
ಈ ಹಿನ್ನೆಲೆ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಅವರು ಕಾದಿರಿಸಿದ ಜಮೀನು ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಆದೇಶದ ಪ್ರಕಾರ, ಶಸ್ತ್ರಾಸ್ತ್ರಗಳನ್ನು ಸಾಗಿಸುವುದು, ಪಟಾಕಿ ಸಿಡಿಸುವುದು, ಪ್ರಚೋದನಕಾರಿ ಘೋಷಣೆ ಕೂಗುವುದು, ಹಾಡು-ಸಂಗೀತ ಕಾರ್ಯಕ್ರಮಗಳು ನಡೆಸುವುದು, ಆವೇಶಭರಿತ ಭಾಷಣ ಮಾಡುವುದು ಹಾಗೂ ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತುಗಳ ತಯಾರಿ, ಪ್ರದರ್ಶನ ಮತ್ತು ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಎಚ್ಚರಿಸಿದೆ.







