ಮಂಗಳೂರು ಜ.30: ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿತವಾಗಿರುವ ಯಾವುದೇ ಆಸ್ಪತ್ರೆಯು ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಈ ಕುರಿತು ಎಲ್ಲಾ ಸಂಬಂಧಿತ ಆಸ್ಪತ್ರೆಗಳಿಗೆ ಅಧಿಕೃತವಾಗಿ ಪತ್ರ ರವಾನಿಸಲಾಗಿದೆ. ಆಸ್ಪತ್ರೆಗಳಿಗೆ ಭೇಟಿ ನೀಡುವ ವೇಳೆ ಆಯುಷ್ಮಾನ್ ಕಾರ್ಡ್ ಹೊಂದಿರಬೇಕೆಂಬ ಕಡ್ಡಾಯತೆ ಇಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಫೋನ್ ಇದ್ದರೆ ಸಾಕು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ 116 ಬೆಡ್ ಲಭ್ಯವಿದೆ. ಆದರೆ, ಈ ಬೆಡ್‌ಗಳು ರೋಗಿಗಳಿಂದ ಭರ್ತಿಯಾಗಿರುತ್ತವೆ. ಹೆಚ್ಚುವರಿ ಬೆಡ್ ಅಳವಡಿಸಿದರೆ ಅಗತ್ಯ ಸಿಬಂದಿ, ಉಪಕರಣಗಳೂ ಬೇಕಾಗುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸಲಾಗುವುದು ಎಂದರು.
ದ.ಕ. ಜಿಲ್ಲೆಯಲ್ಲಿ ಎನ್‌ಎಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರ ಮೂರು ತಿಂಗಳ ಬಾಕಿ ವೇತನ ಒಟ್ಟು 9.66 ಕೋಟಿ ರೂ. ಬಿಡುಗಡೆಗೊಂಡಿದೆ. ಶೇ. 75ರಷ್ಟು ಮಂದಿಯ ವೇತನ ಪಾವತಿ ಆಗಿದೆ. ಶೇ. 25 ಮಾತ್ರ ಬಾಕಿ ಇದೆ. ಒಂದೆರಡು ದಿನಗಳಲ್ಲಿ ನೌಕರರ ಖಾತೆಗೆ ಜಮಾ ಆಗಲಿದೆ. ಗುತ್ತಿಗೆ ವೈದ್ಯರ ವೇತನವೂ ಪಾವತಿ ಆಗಿದೆ ಎಂದು ತಿಳಿಸಿದರು.






