ಉಡುಪಿ ಜ.30 : ಸಿಟಿ ಬಸ್‌ಗಳಿಗೆ ಬಾಗಿಲು ಅಳವಡಿಸಲು ಜಿಲ್ಲಾಡಳಿತ ಜೂನ್ 1ರವರೆಗೆ ಅವಕಾಶ ನೀಡಿದೆ.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಿಟಿ ಬಸ್ ಮಾಲಕರ ಸಭೆಯಲ್ಲಿ ಬಾಗಿಲು ಅಳವಡಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಬಸ್‌ಗಳಿಗೆ ಬಾಗಿಲುಗಳನ್ನು ಶೀಘ್ರವಾಗಿ ಅಳವಡಿಸಬೇಕಾಗಿದೆ. ಆದರೆ ಮಾರ್ಚ್ ತಿಂಗಳ ವರೆಗೂ ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯಲಿರುವುದರಿಂದ ಬಸ್ ಸೇವೆ ವ್ಯತ್ಯಯ ಆಗಬಾರದೆಂಬ ಉದ್ದೇಶದಿಂದ ಹಾಗೂ ಎಲ್ಲ ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸಲು ಸೀಮಿತ ಸಂಖ್ಯೆಯಲ್ಲಿ ಗ್ಯಾರೇಜ್ ಇರುವ ಕಾರಣ ಬಸ್‌ಗಳಿಗೆ ಬಾಗಿಲುಗಳನ್ನು ಆಳವಡಿಸಲು ಜೂ. 1ರ ವರೆಗೆ ಸಮಯವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಫ್ ಸಿ ನವೀಕರಣಕ್ಕೆ ಬಾಕಿ ಇರುವ ಬಸ್‌ಗಳಿಗೆ ಜೂ.1 ರೊಳಗಾಗಿ ಬಾಗಿಲನ್ನು ಅಳವಡಿಸುವ ಷರತ್ತಿಗೊಳಪಟ್ಟು ಅರ್ಹತೆ ಇದ್ದಲ್ಲಿ ಎಫ್ ಸಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಜೂ. 1ರ ಅನಂತರವೂ ಬಸ್‌ಗಳಿಗೆ ಬಾಗಿಲನ್ನು ಅಳವಡಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸದಂತೆ ಬಾಗಿಲುಗಳನ್ನು ಅಳವಡಿಸುವವರೆಗೆ ಅರಿವು ಮೂಡಿಸುವ ಕೆಲಸ ಮಾಡುವಂತೆ ನಿರ್ದೇಶಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಆರ್‌ಟಿಒ ಅಧಿಕಾರಿಗಳು ಹಾಗೂ ಬಸ್ ಮಾಲಕರು, ಬಸ್ ಮಾಲಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.






