ಹೊಸದಿಲ್ಲಿ ಜ.30: ದೇಶದಲ್ಲಿ ಬೆಳ್ಳಿಯ ಬೆಲೆ ಇತಿಹಾಸದಲ್ಲಿ ಮೊದಲ ಬಾರಿಗೆ ಕಿಲೋಗ್ರಾಂಕ್ಕೆ 4 ಲಕ್ಷ ರೂ. ದಾಟಿದ್ದು, ಹೊಸ ದಾಖಲೆ ಬರೆದಿದೆ. ಈಗಿನ ಸ್ಥಿತಿ ಪ್ರಕಾರ, 10 ಗ್ರಾಂ ಶುದ್ಧ ಚಿನ್ನದ ಬೆಲೆ 1.83 ಲಕ್ಷ ರೂ. ಆಗಿದೆ. ವಿಶೇಷವಾಗಿ, ಕೇವಲ ಹತ್ತು ದಿನಗಳಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಸುಮಾರು 1 ಲಕ್ಷ ರೂ. ಹೆಚ್ಚಾಗಿದೆ. ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಅಮೆರಿಕನ್ ಡಾಲರ್ ಮೌಲ್ಯ ಕುಸಿತದ ಪರಿಣಾಮ, ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿರುವ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ಬೇಡಿಕೆ ಕುಂದುಕೊಳ್ಳದೆ ಹೆಚ್ಚುತ್ತಿದೆ.
ಗುರುವಾರ ಬೆಳ್ಳಿ ಬೆಲೆ 19,500 ರೂ. ಹೆಚ್ಚಳದೊಂದಿಗೆ ಕೆಜಿಗೆ 4.04 ಲಕ್ಷ ರೂ. ಆಗಿದೆ. ಇದಕ್ಕೂ ಮೊದಲು 1 ಕೆಜಿ ಬೆಳ್ಳಿ ಬೆಲೆ 3.85 ಲಕ್ಷ ರೂ. ಆಗಿತ್ತು. ಚಿನ್ನವೂ 12,000 ರೂ. ಹೆಚ್ಚಳದೊಂದಿಗೆ 1.83 ಲಕ್ಷ ರೂ. ಆಗಿದೆ. ಬುಧವಾರ 1.71 ಲಕ್ಷ ರೂ. ಇತ್ತು.
ಬೆಂಗಳೂರಿನಲ್ಲಿ ಕೆ.ಜಿ. ಬೆಳ್ಳಿಗೆ 30,000 ರೂ. ಹೆಚ್ಚಳದೊಂದಿಗೆ 4.10 ಲಕ್ಷ ರೂ. ಆಗಿದೆ. ಇದಕ್ಕೂ ಮೊದಲು ಈ ಬೆಲೆ 3.80 ಲಕ್ಷ ರೂ. ಇತ್ತು. 10 ಗ್ರಾಂ ಶುದ್ಧ ಚಿನ್ನ 11,770 ರೂ. ಹೆಚ್ಚಳದೊಂದಿಗೆ 1.78 ಲಕ್ಷ ರೂ. ಆಗಿದೆ






