ಬೆಂಗಳೂರು ಜ.29: ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ಫೆಬ್ರವರಿ ವರೆಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನರೇಗಾ ಕಾಯ್ದೆಗೆ ಬದಲಾಗಿ ಜಾರಿಗೆ ತಂದಿರುವ ವಿಬಿ–ಜಿ ರಾಮ್ ಜಿ ಕಾಯ್ದೆಯ ಬಗ್ಗೆ ವಿವರಿಸಿದರು. ಈ ಕಾಯ್ದೆಯ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶದಿಂದ ಅಧಿವೇಶನವನ್ನು ಇನ್ನೂ ಎರಡು ದಿನ ವಿಸ್ತರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮನರೇಗಾ ಸಂಬಂಧಿಸಿದ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲಾಗಿದ್ದರೂ, ಈವರೆಗೆ ಸಮರ್ಪಕ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸೋಮವಾರ ಹಾಗೂ ಮಂಗಳವಾರ ಮನರೇಗಾ ವಿಚಾರಕ್ಕಾಗಿಯೇ ಅಧಿವೇಶನ ವಿಸ್ತರಿಸುವ ಬಗ್ಗೆ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನ ವಿಸ್ತರಣೆ ನಡೆದರೆ, ಎಲ್ಲ ಶಾಸಕರು ಕಡ್ಡಾಯವಾಗಿ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.






