ಕಾರ್ಕಳ ಜ. 29: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾಳ್ ಬೆಟ್ಟು ಗ್ರಾಮದಲ್ಲಿ ಸಂಸಾರಿಕ ಕಲಹವು ತೀವ್ರತೆಯನ್ನು ಕಂಡು, ಪತಿ ಸುನೀಲ್ ಕುಮಾರ್ ತಮ್ಮ ಪತ್ನಿ ಗೀತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜ.27 ರಂದು ಬೆಳಗ್ಗೆ 9:50 ರ ಸುಮಾರಿಗೆ ದಂಪತಿಗಳ ನಡುವೆ ಜಗಳ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸುನೀಲ್, ಗೀತಾ ಅವರನ್ನು ಕೊಲ್ಲುವ ಉದ್ದೇಶದಿಂದ ಆಯುಧದಿಂದ ಅವರ ಮುಖಕ್ಕೆ ಬಲವಾಗಿ ಹೊಡೆದಿದ್ದಾರೆ.
ಹಲ್ಲೆಯಿಂದಾಗಿ ಗೀತಾ ಅವರ ಮುಖದ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಎದೆಯ ಭಾಗದ ಮೂಳೆಗಳು ಮುರಿದಿವೆ. ಅಲ್ಲದೆ, ಹೊಟ್ಟೆಯ ಒಳಭಾಗಕ್ಕೂ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗೀತಾ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಗೀತಾ ಅವರ ತಮ್ಮ ಅಶೋಕ ಪೂಜಾರಿ ನೀಡಿದ ದೂರಿನಂತೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






