ಕೊಟ್ಟಾಯಂ ಜ. 29: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಕಾರು ಅಪಘಾತದಲ್ಲಿ ಸುರತ್ಕಲ್‌ನ ಕಾನಾ ನಿವಾಸಿಯಾಗಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಅವರ ಜೊತೆಯಲ್ಲಿದ್ದ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ಮೂಲ್ಕಿ ತಾಲೂಕಿನ ಅಂಗರಗುಡ್ಡೆಯ ನಿವಾಸಿ ಶಾನವಾಜ್ ಅಲಿಯಾಸ್ ಶಮೀಮ್ (27) ಎಂದು ಗುರುತಿಸಲಾಗಿದ್ದು, ಅವರು ಇತ್ತೀಚೆಗೆ ಕಾನಾದಲ್ಲಿ ನೆಲೆಸಿದ್ದರು.
ಕಾಟಿಪಳ್ಳದ ಸಿರಾಜ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನಾದ ಅಸ್ಪಾಕ್, ಸೂರಿಂಜೆಯ ಶಬ್ಬಿರ್ ಮತ್ತು ಕಾರು ಚಲಾಯಿಸುತ್ತಿದ್ದ ರಾಜಸ್ಥಾನದ ಚಾಲಕ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಶಮೀಮ್ ಮತ್ತು ಇತರ ನಾಲ್ವರು ಸ್ನೇಹಿತನೋರ್ವನ ಕಣ್ಣಿನ ಚಿಕಿತ್ಸೆ ಇದ್ದ ಕಾರಣ ತೆರಳಿದ್ದರು.
ಬುಧವಾರ ಬೆಳಗ್ಗೆ, ಅವರು ಉಪಾಹಾರ ಸೇವಿಸಲು ಪಟ್ಟಣದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿತು ಎಂದು ವರದಿಯಾಗಿದೆ.
ಇತ್ತೀಚೆಗೆ ಕೃಷ್ಣಾಪುರಕ್ಕೆ ಖ್ಯಾತ ಕ್ರಿಕೆಟ್ ಪಟು ಮೊಹಮ್ಮದ್ ಶಮ್ಮಿ ಬಂದಾಗ ಅವರಿಗೆ ಬೌನ್ಸರ್ ಆಗಿ ಇತರ ಬೌನ್ಸರ್ ಗಳೊಂದಿಗೆ ಶಮೀಮ್ ಇದ್ದರು.






